ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಖ್ ಅಬ್ದುಲ್ಲಾ
ನವದೆಹಲಿ: ಬೇಜವಾಬ್ದಾರಿತನ ರೀತಿಯಲ್ಲಿ ಹೇಳಿಕೆ ನೀಡುವುದನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಖ್ ಅಬ್ದುಲ್ಲಾ ಅವರು ಮೊದಲು ನಿಲ್ಲಿಸಬೇಕೆಂದು ಬಿಜೆಪಿ ಶುಕ್ರವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಎಸ್. ಪ್ರಕಾಶ್ ಅವರು, ತಮ್ಮ ಹೇಳಿಕೆ ಕುರಿತು ಫರೂಖ್ ಅಬ್ದುಲ್ಲಾ ಅವರು ಸ್ಪಷ್ಟನೆ ನೀಡಬೇಕಿದೆ. ಫರೂಖ್ ಅವರ ಹೇಳಿಕೆಗಳು ದೇಶದಲ್ಲಿ ಗೊಂದಲಗಳನ್ನು ಸೃಷ್ಟಿ ಮಾಡಲಿದೆ. ಹೀಗಾಗಿ ಬೇಜವಾಬ್ದಾರಿತನದಿಂದ ಹೇಳಿಕೆ ನೀಡುವುದನ್ನು ಫರೂಖ್ ಮೊದಲು ನಿಲ್ಲಿಸಬೇಕೆಂದು ಹೇಳಿದ್ದಾರೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಫರೂಖ್ ಅಬ್ದುಲ್ಲಾ ಅವರು, ಭಾರತಕ್ಕೆ ಚೀನಾ ದೇಶದಿಂದಾಗಲೀ ಅಥವಾ ಪಾಕಿಸ್ತಾನ ರಾಷ್ಟ್ರದಿಂದಾಗೀ ಬೆದರಿಕೆಯಿಲ್ಲ. ಬದಲಿಗೆ ದೇಶದೊಳಗೆ ಕುಳಿತು ಅಧಿಕಾರ ನಡೆಸುತ್ತಿರುವ ಆತಂಕವಾದಿಗಳಿಂದಲೇ ಹೆಚ್ಚು ಬೆದರಿಕೆಯಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರೂ ಕೂಡ ಹೋರಾಟ ಮಾಡಿದ್ದಾರೆ. ಭಾರತೀಯ ಮುಸ್ಲಿಮನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ.
ಈ ಹಿಂದೆ ನಾವು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದೆವು. ಇಂದು ನಮ್ಮ ಜನರೊಂದಿಗೆ ಹೋರಾಟ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಪ್ರಸ್ತುತ ದೇಶದೊಳಗೆ ಕುಳಿತು ಆತಂಕ ಸೃಷ್ಟಿಸುತ್ತಿರುವವರು ರಾಷ್ಟ್ರದಲ್ಲಿರುತ್ತಾರೆ. ಆದರೆ, ಹೆಚ್ಚು ಉಳಿಯಲಾರರು. ಭಾರತವನ್ನು ಬ್ರಿಟೀಷರು ಹೇಗೆ ಬಿಟ್ಟು ತೊಲಗಿದರೋ ಹಾಗೆಯೇ ಅವರಿಗೂ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದ್ದರು.