ಭೋಪಾಲ್: ಬಿಜೆಪಿ ಇರುವುದು ಕೇವಲ 5-10 ವರ್ಷಗಳ ಆಡಳಿತಕ್ಕಾಗಿ ಅಲ್ಲ, ಕನಿಷ್ಠ 50 ವರ್ಷಗಳ ಆಡಳಿತಕ್ಕಾಗಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದು, ಪಕ್ಷವನ್ನು ದೇಶದ ಮೂಲೆ ಮೂಲೆಗೂ ಕೊಂಡೊಯ್ಯುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ಅಮಿತ್ ಷಾ, ಕೇಂದ್ರದಲ್ಲಿ ಬಹುಮತ ಪಡೆದು ಅಧಿಕಾರದಲ್ಲಿದ್ದು, 1,387 ಶಾಸಕರನ್ನು ಹೊಂದಿದ್ದರೂ ಪಕ್ಷ ಇನ್ನೂ ಬೆಳೆಯಬೇಕಿದೆ ಎಂದು ಪಕ್ಷದ ಕಾರ್ಯಕರ್ತರಲ್ಲಿ ಅಭಿಪ್ರಾಯವಿದೆ ಎಂದು ಹೇಳಿದ್ದಾರೆ. ನಾವು 5-10 ವರ್ಷ ಅಧಿಕಾರದಲ್ಲಿರಲು ಬಂದಿಲ್ಲ, ಕನಿಷ್ಠ 50 ವರ್ಷ ಅಧಿಕಾರ ನಡೆಸಲು ಬಂದಿದ್ದೇವೆ, ಅಧಿಕಾರದ ಮೂಲಕವಾಗಿ 40-50 ವರ್ಷಗಳಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ಜಾರಿಗೆ ತರಬೇಕೆಂಬ ಘೋಷಣೆಯೊಂದಿಗೆ ಮುನ್ನಡೆಯಬೇಕಿದ್ದು, ಬಿಜೆಪಿಯ ಧ್ವಜ ಇಲ್ಲದಿರುವ ಪ್ರದೇಶವೇ ಇಲ್ಲ ಎಂಬಂತೆ ಮಾಡಬೇಕು ಎಂದು ಷಾ ಕರೆ ನೀಡಿದ್ದಾರೆ.