ಸತ್ನ(ಮಧ್ಯಪ್ರದೇಶ): ಪರೀಕ್ಷೆಯಲ್ಲಿ ತನಗಿಂತ ಹೆಚ್ಚಿನ ಅಂಕ ಪಡೆದಿದ್ದಾಳೆ ಎಂಬ ಕಾರಣಕ್ಕೆ ವಿದ್ಯಾರ್ಥಿನಿಗೆ ಸಹ ವಿದ್ಯಾರ್ಥಿನಿಯೇ ವಿಷ ಉಣಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸತ್ನ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನೀರಿನ ಬಾಟಲಿಗೆ ಸೊಳ್ಳೆ ನಿವಾರಕ ದ್ರವವನ್ನು ಹಾಕಿ ಆರೋಪಿ ವಿದ್ಯಾರ್ಥಿನಿ ಸಂತ್ರಸ್ತ ವಿದ್ಯಾರ್ಥಿನಿಗೆ ಕೊಟ್ಟಿದ್ದಾಳೆ. ಈ ನೀರನ್ನು ಕುಡಿದ ವಿದ್ಯಾರ್ಥಿನಿ ನಂತರ ವಾಂತಿ ಮಾಡಿಕೊಂಡಿದ್ದು ಅಸ್ವಸ್ಥಳಾಗಿದ್ದಾಳೆ. ಇದನ್ನು ಅರಿತ ಆಡಳಿತ ಮಂಡಳಿ ಕೂಡಲೇ ಪೋಷಕರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ವಿದ್ಯಾರ್ಥಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಕುಡಿದಿರುವ ನೀರಿನಲ್ಲಿ ವಿಷ ಪದಾರ್ಥ ಸೇರಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಶಾಲೆಯಲ್ಲಿ ಅಳಡಿಸಿದ್ದ ಸಿಸಿಟಿವಿಯನ್ನು ಪರೀಕ್ಷಿಸಿದಾಗ ಆರೋಪಿ ವಿದ್ಯಾರ್ಥಿನಿ ನೀರಿನ ಬಾಟಲಿನಲ್ಲಿ ಸೊಳ್ಳೆ ನಿವಾರಕ ದ್ರವವನ್ನು ಬೆರೆಸಿರುವುದು ಕಂಡು ಬಂದಿದೆ.
ಇನ್ನು ಪೊಲೀಸರಿಗೆ ತಾನು ಮಾಡಿದ ಕೃತ್ಯ ತಿಳಿದಿದೆ ಎಂದು ಹೆದರಿದ ಆರೋಪಿ ವಿದ್ಯಾರ್ಥಿನಿ ನಿನ್ನೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವೈದ್ಯರು ಆರೋಪಿ ವಿದ್ಯಾರ್ಥಿನಿಯ ಆರೋಗ್ಯ ಗಂಭೀರವಾಗಿರುವುದಾಗಿ ಹೇಳಿದ್ದಾರೆ.
ಸಹ ವಿದ್ಯಾರ್ಥಿನಿಗೆ ವಿಷ ಉಣಿಸಿದ ಆರೋಪದ ಮೇಲೆ ಆರೋಪಿ ವಿದ್ಯಾರ್ಥಿನಿ ವಿರುದ್ಧ ಐಪಿಸಿ ಸೆಕ್ಷನ್ 328ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.