ಕಾಂಗ್ರೆಸ್ ನಾಯಕರಾದ ಪಿ.ಚಿದಂಬರಂ ಮತ್ತು ರಂದೀಪ್ ಎಸ್.ಸುರ್ಜೆವಾಲಾ
ಶ್ರೀನಗರ: ಖಾಸಗಿತನ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೆ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಇದೊಂದು ಮಹತ್ವಪೂರ್ಣ ಮೂಲ ತೀರ್ಪು ಎಂದು ಶ್ಲಾಘಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೆವಾಲಾ, ಸುಪ್ರೀಂ ಕೋರ್ಟ್ ನ ತೀರ್ಪನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ವ್ಯಕ್ತಿಯ ಖಾಸಗಿ ವಿಷಯಗಳನ್ನು ಗೌಪ್ಯವಾಗಿ ಕಾಪಾಡುವುದು ಮೂಲಭೂತ ಹಕ್ಕು ಎಂಬ ವಾದವನ್ನು ತಿರಸ್ಕರಿಸಲು ಪ್ರಯತ್ನಿಸುವ ಮೋದಿ ಸರ್ಕಾರದ ಪ್ರಯತ್ನಕ್ಕೆ ಇದು ಬ್ರೇಕ್ ಹಾಕಲಿದೆ ಎಂದಿದ್ದಾರೆ.
ವ್ಯಕ್ತಿಯ ಖಾಸಗಿತನ ಕಾಪಾಡುವ ಮೂಲಭೂತ ಹಕ್ಕನ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಿಜಕ್ಕೂ ಮಹತ್ವಪೂರ್ಣ. ಇದೊಂದು ಐತಿಹಾಸಿಕ ತೀರ್ಪು. ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದಿದ್ದಾರೆ.
ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಈ ತೀರ್ಪು ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ವ್ಯಕ್ತಿಯ ಸ್ವಾತಂತ್ರ್ಯ ಕುರಿತಾದ ತೀರ್ಪನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಸಂವಿಧಾನ ಪರಿಚ್ಛೇದ 21 ವ್ಯಕ್ತಿಯ ಜೀವನ ಮತ್ತು ಸ್ವಾತಂತ್ರ್ಯದ ಕುರಿತಾಗಿದೆ. ಇದಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯುಂಟಾದರೆ ಹೋರಾಡಬೇಕು. ಖಾಸಗಿತನ ವೈಯಕ್ತಿಕ ಸ್ವಾತಂತ್ರ್ಯವಾಗಿದೆ.ವ್ಯಕ್ತಿಯ ಜೀವನದಲ್ಲಿ ಖಾಸಗಿತನಕ್ಕೆ ಕೂಡ ಬೆಲೆಯಿರಬೇಕಾಗುತ್ತದೆ. ಇಂದು ನಾವು ನಮ್ಮ ಸ್ವಾತಂತ್ರ್ಯವನ್ನು ಆಚರಿಸಬಹುದಾಗಿದೆ. ಇದು ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದಿದ್ದಾರೆ.
ಆಧಾರ್ ಪರಿಕಲ್ಪನೆಯಲ್ಲಿ ಯಾವುದೇ ಲೋಪದೋಷವಿಲ್ಲ. ಆದರೆ ಆಧಾರ್ ನ್ನು ಬಳಸಿಕೊಂಡು ಸರ್ಕಾರ ಅದನ್ನು ಹೇಗೆ ಉಪಯೋಗಿಸುತ್ತದೆ ಅಥವಾ ದುರುಪಯೋಗಪಡಿಸಿಕೊಳ್ಳುತ್ತದೆ ಎಂಬುದು ಮುಖ್ಯವಾಗುತ್ತದೆ ಎಂದರು.