ದೇಶ

ಅತ್ಯಾಚಾರಿ ಬಾಬಾ ಗುರ್ಮಿತ್ ಪರಾರಿಗೆ ಝಡ್ ಪ್ಲಸ್ ಸಿಬ್ಬಂದಿಗಳಿಂದಲೇ ಯತ್ನ?

Manjula VN
ಚಂಡೀಗಢ: ಅತಿಗಣ್ಯರ ರಕ್ಷಣೆಗೆ ನಿಯೋಜನೆಗೊಂಡಿರುವ ಝಢ್ ಪ್ಲಸ್ ದಳದ ಪೊಲೀಸರೇ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ ನನ್ನು ಬಂಧನದಿಂದ ಪಾರು ಮಾಡಿಸಲು ಯತ್ನಿಸಿದ್ದರು ಎಂಬ ಆತಂಕಕಾರಿ ವಿಷಯ ಇದೀಗ ಬಹಿರಂಗಗೊಂಡಿದೆ. 
15 ವರ್ಷಗಳ ಹಂದಿನ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಿಬಿಐ ನ್ಯಾಯಾಲಯದ ತೀರ್ಪು ನೀಡಿದ ಬಳಿಕ, ಡೇರಾ ಮುಖ್ಯಸ್ಥನ ಭದ್ರತೆಗೆ ನಿಯೋಜನೆಗೊಂಡಿದ್ದ 5 ಪೊಲೀಸರು ರಾಮ್ ರಹೀಂ ಸಿಂಗ್ ನನ್ನು ಬಂಧನದಿಂದ ಪಾರು ಮಾಡಿಸಲು ಯತ್ನ ನಡೆಸಿದ್ದರು. 
ಈ ಹಂತದಲ್ಲಿ ಅವರು ಹಾಗೂ ಹರಿಯಾಣ ಪೊಲೀಸರ ನಡುವೆ ಜಟಾಪಟಿಯೇ ನಡೆದಿದೆ. ಕೊನೆಗೆ 5 ಪೊಲೀಸರು ಹಾಗೂ ಇಬ್ಬರು ಖಾಸಗಿ ಅಂಗರಕ್ಷಕರನ್ನು ಬಂಧಿಸಿ, ರಾಮ್ ರಹೀಂನನ್ನು ವಶಕ್ಕೆ ಪಡೆಯವಷ್ಟರಲ್ಲಿ ಹರಿಯಾಣ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಬಂಧಿತ ಪೊಲೀಸರು, ಕಮಾಂಡೋಗಳ ವಿರುದ್ಧ ದೇಶದ್ರೋಹ ಮತ್ತು ಹತ್ಯೆ ಯತ್ನದ ಮೊಕದ್ದಮೆ ಹೂಡಲಾಗಿದೆ. 
ನ್ಯಾಯಾಲಯ ತೀರ್ಪು ನೀಡುವುದಕ್ಕೂ ಮೂನ್ನ ರಾಮ್ ರಹೀಂ ಝಡ್ ಪ್ಲಸ್ ಭದ್ರತಾ ಸೌಲಭ್ಯವನ್ನು ಪಡೆಯುತ್ತಿದ್ದರು. ಆತನ ಭದ್ರತೆಗೆ ಹರಿಯಾಣದ ಐವರು ಪೊಲೀಸರನ್ನು ನಿಯೋಜಿಸಲಾಗಿತ್ತು. ಇದಲ್ಲದೆ, ಖಾಸಗಿಯಾಗಿ ಇಬ್ಬರು ಕಮಾಂಡೋಗಳನ್ನು ರಾಮ್ ರಹೀಂ ನೇಮಿಸಿಕೊಂಡಿದ್ದ. 
ಸಿಬಿಐ ನ್ಯಾಯಾಲಯ ಶಿಕ್ಷೆಗೊಳಗಾದ ರಾಮ್ ರಹೀಮ್ ನನ್ನು ಹರಿಯಾಣ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಆತನ ಭದ್ರತೆಗೆ ನಿಯೋಜನೆಗೊಳಿಸಲಾಗಿದ್ದ ಸಿಬ್ಬಂದಿಯೇ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ. ರಾಮ್ ರಹೀಂ ನನ್ನು ಪರಾರಿ ಮಾಡಿಸಲು ಯತ್ನ ನಡೆಸಿದ್ದರು. ಈ ಹಂತದಲ್ಲಿ ಹರಿಯಾಣ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೇ ಥಳಿಸಿದ್ದಾರೆ. 
ಈ ಹಿನ್ನಲೆಯಲ್ಲಿ ಝಡ್ ಪ್ಲಸ್ ಭದ್ರತೆ ಒದಗಿಸುತ್ತಿದ್ದ 5 ಪೊಲೀಸರು ಹಾಗೂ ಸಹಾಯಕ್ಕಿದ್ದ ಇಬ್ಬರು ಕಮಾಂಡೋಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 7 ಮಂದಿಯ ವಿರುದ್ಧವೂ ದೇಶದ್ರೋಹ ಸೇರಿದಂತೆ ವಿವಿಧ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. 
ಹರಿಯಾಣ ಪೊಲೀಸರ ವಶದಿಂದ ಬಲವಂತವಾಗಿ ರಾಮ್ ರಹೀಂನನ್ನು ಝಡ್ ಪ್ಲಸ್ ಭದ್ರತಾ ಸಿಬ್ಬಂದಿ ತಮ್ಮ ತೆಕ್ಕೆಗೆ ತೆಗೆದುಕೊಂಡು ನ್ಯಾಯಾಲಯದ ಆವರಣದಿಂದ 1 ಕಿ.ಮೀ ದೂರದಲ್ಲಿದ್ದ ಸಹಸ್ರಾರು ಭಕ್ತರ ಬಳಿಗೆ ಕರೆದೊಯ್ಯುವಲ್ಲಿ ಸಫಲರಾಗಿದ್ದರೆ, ಆತನನ್ನು ಬಂಧಇಸಲು ಪೊಲೀಸರು ಸಾಧ್ಯವೇ ಆಗುತ್ತಿರಲ್ಲ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. 
ಭಕ್ತ ಸಮೂಹದ ನಡುವಿನಿಂದ ಬಂಧನಕ್ಕೆ ಯತ್ನಿಸಿದ್ದರೆ ಭಾರೀ ಪ್ರಮಾಣದ ಸಾವು-ನೋವುಗಳು ಸಂಭವಿಸುವ ಅಪಾಯವಿತ್ತು ಎಂದು ತಿಳಿಸಿದ್ದಾರೆ.
ರಾಮ್ ರಹೀಂ ಭದ್ರತೆಗೆ ಹರಿಯಾಣ ಸರ್ಕಾರ ನಿಯೋಜಿಸಿದ್ದ ಐವರು ಭದ್ರತಾ ಸಿಬ್ಬಂದಿಗಳು ಹಾಗೂ ಮತ್ತಿಬ್ಬರು ಖಾಸಗಿ ಅಂಗರಕ್ಷಕರು 7-8 ವರ್ಷಗಳ ಕಾಲ ರಾಮ್ ರಹೀಂ ಜೊತೆಗೇ ಇದ್ದುದ್ದರಿಂದ ಇವರೆಲ್ಲರೂ ಅವರ ಭಕ್ತರಾಗಿ ಬದಲಾಗಿದ್ದರು. ಹೀಗಾಗಿ, ಬಾಬಾರನ್ನು ಬಂಧನದಿಂದ ಪರಾರಿ ಮಾಡಲು ಯತ್ನ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. 
SCROLL FOR NEXT