ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಮತ್ತು ಉಧಾಂಪುರ್ ಜಿಲ್ಲೆಗಳಿಂದ 45ಕ್ಕೂ ಹೆಚ್ಚು ಗೋವುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಮೂವರು ವ್ಯಕ್ತಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಲಾರಿಯಲ್ಲಿ 18 ಗೋವುಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಇಬ್ಬರನ್ನು ಜಮ್ಮುವಿನಿಂದ ಸುಮಾರು 80 ಕಿ.ಮೀ.ದೂರದಲ್ಲಿರುವ ಉಧಾಂಪುರ್ ಜಿಲ್ಲೆಯ ಜಖಾನಿ ಚೌಕ್ ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಜಮ್ಮುವಿನಿಂದ ಶ್ರೀನಗರಕ್ಕೆ ಗೋವುಗಳನ್ನು ಸಾಗಿಸಲು ಬೇಕಾದ ಅಗತ್ಯ ದಾಖಲೆಗಳನ್ನು ನೀಡಲು ಆರೋಪಿಗಳು ವಿಫಲವಾಗಿದ್ದರಿಂದ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇನ್ನು ದೋಡಾ ಜಿಲ್ಲೆಯಲ್ಲಿ 28 ಗೋವುಗಳನ್ನು ಕಳ್ಳಸಾಗಾಣೆ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.