ದೇಶ

ಜೋಧ್ಪುರ: ಆಪರೇಷನ್ ಥಿಯೇಟರ್'ನಲ್ಲಿ ವೈದ್ಯರ ಜಗಳ; ನವಜಾತ ಶಿಶು ಸಾವು

Manjula VN
ಜೈಪುರ: ತುಂಬು ಗರ್ಭಿಣಿಯೊಬ್ಬಳು ಬೆಡ್ ಮೇಲೆ ಮಲಗಿರುವಾಗಲೇ, ಆಕೆಯ ಶಸ್ತ್ರಚಿಕಿತ್ಸೆಯತ್ತ ಗಮನ ನೀಡಬೇಕಾದ ಇಬ್ಬರು ವೈದ್ಯರು ಪರಸ್ಪರ ಮಾತಿನ ಚಕಮಕಿಗೆ ಇಳಿದು, ಜಗಳ ಮಾಡಿಕೊಂಡು ನಿಂತ ಪರಿಣಾಮ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ನವಜಾತ ಶಿಶುವೊಂದು ಸಾವನ್ನಪ್ಪಿರುವ ಘಟನೆ ರಾಜಸ್ತಾನದ ಜೋಧ್ಪುರದಲ್ಲಿ ನಡೆದಿದೆ. 
ಜೋಧ್ಪುರದ ಉಮೈದ್ ಆಸ್ಪತ್ರೆಯಲ್ಲಿ ನಿನ್ನೆ ತುಂಬು ಗರ್ಭಿಣಿ ಮಹಿಳೆಯೊಬ್ಬರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡುವ ಸಲುವಾಗಿ ಆಪರೇಷನ್ ಥಿಯೇಟರ್ ಬೆಡ್ ಮೇಲೆ ಮಲಗಿಸಲಾಗಿತ್ತು. ಈ ವೇಳೆ ಪ್ರಸೂತಿ ತಜ್ಞ ಡಾ. ಅಶೋಕ್ ನೈನ್ ವಾಲ್ ಹಾಗೂ ಅರವಳಿಕೆ ತಜ್ಞ ಎಂಎಲ್ ತಾಕ್ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಣಾಮ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ನವಜಾತ ಶಿಶು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. 
ಆಪರೇಷನ್ ಥಿಯೇಟರ್ ನಲ್ಲಿ ವೈದ್ಯರು ಕಿತ್ತಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿರುವ ಪ್ರಕಾರ, ಗರ್ಭಿಣಿ ಮಹಿಳೆ ಬೆಡ್ ಮೇಲೆ ಮಲಗಿರುವ ವೇಳೆ ಡಾ.ಅಶೋಕ್ ಅವರು ಆಪರೇಷನ್ ಗೂ ಮುನ್ನ ಮಹಿಳೆ ಏನಾದರೂ ಸೇವಿಸಿದ್ದಾರೆಯೇ ಎಂದು ಪ್ರಶ್ನಿಸುತ್ತಾರೆ. ಈ ವೇಳೆ ಯಾರೊಬ್ಬರೂ ಉತ್ತರ ನೀಡುವುದಿಲ್ಲ. ಸ್ಥಳದಲ್ಲಿದ್ದ ಅರವಳಿಕೆ ತಜ್ಞ ಎಂ.ಎಲ್ ತಾಕ್ ಅವರು ಪರೀಕ್ಷೆಗಳನ್ನು ಮುಂದುವರೆಸುವಂತೆ ಕಿರಿಯ ವೈದ್ಯರಿಗೆ ಸೂಚನೆ ನೀಡುತ್ತಾರೆ. ಇದಕ್ಕೆ ಅಶೋಕ್ ಅವರು ಒಪ್ಪಿವುದಿಲ್ಲ. 
ಇದೇ ಕಾರಣಕ್ಕೆ ಅಶೋಕ್ ಹಾಗೂ ತಾಕ್ ವಾಗ್ವಾದಕ್ಕಿಳಿದಿದ್ದಾರೆ. ಅಪರೇಷನ್ ಬೆಡ್ ಮೇಲೆ ಗರ್ಭಿಣಿ ಮಲಗಿದ್ದಾಳೆ ಎಂಬ ಅರಿವೇ ಇಲ್ಲದೆ ವೈದ್ಯರಿಬ್ಬರು ಪರಸ್ಪರ ಕಿತ್ತಾಡಿದ್ದಾರೆ. ಈ ವೇಳೆ ನರ್ಸ್ ವೊಬ್ಬರು ಗರ್ಭಿಣಿಗೆ ಆಪರೇಷನ್ ಮಾಡಬೇಕಿರುವುದನ್ನು ನೆನಪಿಸುತ್ತಾರೆ. ಬಳಿಕ ವೈದ್ಯರು ಹೇಗೋ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುತ್ತಾರೆ. ಆದರೆ, ಶಸ್ತ್ರಚಿಕಿತ್ಸೆ ಬಳಿಕ ಮಗು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. 
ಆಪರೇಷನ್ ಥಿಯೇಟರ್ ನಲ್ಲಿ ವೈದ್ಯರಿಬ್ಬರು ಜಗಳವಾಡಿರುವುದಕ್ಕೆ ಇದೀಗ ವ್ಯಾಪಕ ಖಂಡನೆಗಳು ವ್ಯಕ್ತವಾಗತೊಡಗಿವೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜಸ್ತಾನ ಹೈಕೋರ್ಟ್ ಉಮೈದ್ ಆಸ್ಪತ್ರೆಗೆ ಸಮನ್ಸ್ ಜಾರಿ ಮಾಡಿದ್ದು, ಕೂಡಲೇ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. 
SCROLL FOR NEXT