ಬ್ಲೂವೇಲ್ ಗೇಮ್ ಭೂತ: ಆತ್ಮಹತ್ಯೆಗೆ ಶರಣಾದ ಮದುರೈ ವಿದ್ಯಾರ್ಥಿ
ಮದುರೈ: ರಷ್ಯಾ ಮೂಲದ ಆಪಾಯಕಾರಿ ಆಟ ಆನ್'ಲೈನ್ ಗೇಮ್ ಭೂತಕ್ಕೆ ಮದುರೈನ ಕಾಲೇಜು ವಿದ್ಯಾರ್ಥಿಯೊಬ್ಬ ಬುಧವಾರ ಬಲಿಯಾಗಿದ್ದಾನೆ.
ಆಟದ ಕೊನೆಯ ಹಂತಕ್ಕೆ ತಲುಪಿದ್ದ ಕಾಲೇಜು ವಿದ್ಯಾರ್ಥಿ ನಿನ್ನೆ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಘ್ನೇಶ್ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದಾನೆ. ತಿರುಪರನ್ಕುಂದ್ರಮ್ ನಲ್ಲಿರುವ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿ ಎರಡನೇ ವರ್ಷದ ಬಿ.ಕಾಮ್ ಪದವಿ ಮಾಡುತ್ತಿದ್ದ.
ನಿನ್ನೆ ಕಾಲೇಜಿಗೆ ಹೋಗಿದ್ದ ವಿಘ್ನೇಶ್ ಊಟಕ್ಕೆಂದು ತನ್ನ ಗೆಳೆಯನನ್ನು ಮನೆಗೆ ಕರೆತಂದಿದ್ದಾನೆ. ಊಟ ಮುಗಿಸಿ ಗೆಳೆಯ ಹೊರ ಹೋದ ಬಳಿಕ ಬ್ಲೂವೇಲ್ ಗೇಮ್ ಆಡಿರುವ ವಿಘ್ನೇಶ್ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಘ್ನೇಶ್ ಆತ್ಮಹತ್ಯೆ ಮಾಡಿಕೊಂಡಿರುವ ವೇಳೆ ಪೋಷಕರು ಮನೆಯಲ್ಲಿರಲಿಲ್ಲ. ಸಂಜೆ ವೇಳೆಗೆ ವಿಘ್ನೇಶ್ ತಾಯಿ ಮನೆಗೆ ಬಂದಾಗ ಮಗ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕಾಗಮಿಸಿರುವ ಪೊಲೀಸರು ತಿರುಮಂಗಲಮ್ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ವಿಘ್ನೇಶ್ ಕೈಮೇಲೆ ಬ್ಲೂವೇಲ್ ಬರೆದುಕೊಂಡಿರುವುದು ಪತ್ತೆಯಾಗಿದೆ. ವಿಘ್ನೇಶ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪತ್ರವೊಂದು ದೊರಕಿದ್ದು, ಬ್ಲೂವೇಲ್ ಕೇವಲ ಆಟವಲ್ಲ ಇದೊಂದು ದುರಂತ. ಒಂದು ಬಾರಿ ಆಟದ ಒಳ ಬಂದರೆ, ಮತ್ತೆ ಹೊರ ಹೋಗಲು ಸಾಧ್ಯವಿಲ್ಲ ಎಂದು ಬರೆಯಲಾಗಿದೆ.
ಬ್ಲೂವೇಲ್ ಗೇಮ್ ಆಡುತ್ತಿದ್ದ ವಿದ್ಯಾರ್ಥಿ ಅಂತಿಮ ಘಟ್ಟ ತಲುಪಿದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಸ್ತುತ ಮೊಬೈಲ್ ನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಲೂ ವೇಲ್ ಒಂದು ಆನ್ ಲೈನ್ ಗೇಮ್ ಆಗಿದ್ದು, ಇದರಲ್ಲಿ ಸವಾಲು ಸ್ವೀಕರಿಸಿದವರಿಗೆ ದಿನಕ್ಕೊಂದು ಟಾಸ್ಕ್ ನೀಡಲಾಗುತ್ತದೆ. ಸವಾಲು ಸ್ವೀಕರಿಸುವಾಗ ಕಡೆಯಲ್ಲಿ ನೀವು ಸಾಯಬೇಕಾಗುತ್ತದೆ ಎಂದು ಸೂಚಿಸಲಾಗುತ್ತದೆ. ಮಾನಸಿಕವಾಗಿ ದುರ್ಬಲ ಮಕ್ಕಳನ್ನೇ ಗೇಮ್ ನತ್ತ ಸೆಳೆಯಲಾಗುತ್ತದೆ. ಒಂದು ವೇಳೆ, ಮಕ್ಕಳು ಮಧ್ಯದಲ್ಲಿ ಹಿಂದೆ ಸರಿಯಲು ಯತ್ನಿಸಿದರೆ, ನಿಮ್ಮ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ನಮ್ಮವರು ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಹೆದರಿಸಲಾಗುತ್ತದೆ.
ಇದನ್ನು ಒಪ್ಪಿದವರಿಗೆ ದಿನಕ್ಕೊಂದರಂತೆ 50 ದಿನ ಹೊಸ ಟಾಸ್ಕ್ ನೀಡಲಾಗುತ್ತದೆ. ರಾತ್ರಿ ಏಳುವುದು, ಭಯಾನಕ ಚಿತ್ರ ನೋಡುವುದು, ನರ ಕತ್ತರಿಸಿಕೊಳ್ಳುವುದು ಹೀಗೆ ನಾನು ಕಠಿಣ ಟಾಸ್ಕ್ ಗಳು ಇರುತ್ತದೆ. 50ನೇ ದಿನ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ. ಈ ಭಯಾನಕ ಗೇಮ್ ನಿಂದಾಗಿ ಯುರೋಪ್ ಮತ್ತು ರಷ್ಯಾದಾದ್ಯಂತ ಈ ವರೆಗೂ ಸುಮಾರು 150 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಇದೇ ಗೇಮ್ ಭಾರತೀಯರನ್ನೂ ಭೀತಿಗೊಳಗಾಗುವಂತೆ ಮಾಡುತ್ತಿದೆ.