ಸಿಎಂ ಚಂದಜ್ರಬಾಬು ಅವರಿಗೆ ಸಿಹಿ ತಿನ್ನಿಸಿದ ಕಾಪು ಮುಖಂಡರು
ಅಮರಾವತಿ: ಕಾಪು ಸಮುದಾಯದ ಹೋರಾಟಕ್ಕೆ ಕೊನೆಗೂ ಮಣಿದ ಆಂಧ್ರ ಪ್ರದೇಶ ಸರ್ಕಾರ ಕಾಪು ಮೀಸಲಾತಿ ಮಸೂದೆಯನ್ನು ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಮಂಡಿಸಿದ್ದು ಮಾತ್ರವಲ್ಲದೇ ವಿಧಾನಸಭೆಯ ಅವಿರೋಧ ಅಂಗೀಕಾರ ಕೂಡ ಪಡೆದಿದೆ.
ಮೂಲಗಳ ಪ್ರಕಾರ ಈ ಮಸೂದೆ ಅಂಗೀಕಾರದ ಮೂಲಕ ಕಾಪು ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ದೊರೆಯಲಿದ್ದು, ಆಂಧ್ರ ಪ್ರದೇಶ ಸರ್ಕಾರ ಒಟ್ಟಾರೆ ಮೀಸಲಾತಿ ಗಾತ್ರವನ್ನು ಶೇ.50ಕ್ಕೆ ಹಿಗ್ಗಿಸಿಕೊಂಡಂತಾಗಿದೆ. ಪ್ರಸ್ತುತ ಕಾಪು ಮೀಸಲಾತಿ ಮಸೂದೆ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಆಂಗೀಕಾರವಾಗಿದೆಯಾದರೂ ಮಸೂದೆಗೆ ಕೇಂದ್ರಸರ್ಕಾರದ ಅನುಮೋದನೆ ಅಗತ್ಯ. ಹೀಗಾಗಿ ಶೀಘ್ರದಲ್ಲೇ ಅಂಗೀಕಾರ ಮಸೂದೆಯನ್ನು ಆಂಧ್ರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ರವಾನಿಸಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಆಂಧ್ರ ಪ್ರದೇಶ ಸಿಎಂ ಎಂ ಚಂದ್ರಬಾಬು ನಾಯ್ಡು ಅವರು, ಪ್ರಸ್ತುತ ಯಶಸ್ವಿಯಾಗಿ ಸರ್ಕಾರದ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ, ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಅಂಗೀಕೃತ ಮಸೂದೆಯನ್ನು ಅನುಮೋದನೆಗಾಗಿ ರವಾನಿಸಲಾಗುತ್ತದೆ. ಕೇಂದ್ರದ ಅನುಮೋದನೆಯೂ ದೊರೆತ ಬಳಿಕ ಮೀಸಲಾತಿ ಜಾರಿಯಾಗಲಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದ ಕಾಪು ಸಮುದಾಯದ ಮುಖಂಡರು ನಮಗೆ ರಾಜಕೀಯ ಮೀಸಲಾತಿ ಬೇಡ.. ಆದರೆ ಶೈಕ್ಷಣಿಕ ಮತ್ತು ವೃತ್ತಿ ಮೀಸಲಾತಿ ಮಾತ್ರ ಸಾಕು ಎಂದು ಹೇಳಿದ್ದರು. ಹೀಗಾಗಿ ಅವರ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಸಿಎಂ ನಾಯ್ಡು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಸಭೆ ಬಳಿಕ ಕಾಪು ಮುಖಂಡರು ಸಿಎಂ ಚಂದ್ರಬಾಬು ಅವರಿಗೆ ಸಿಹಿ ತಿನ್ನಿಸುವ ಮೂಲಕ ಸಂತಸ ಹಂಚಿಕೊಂಡರು.
ಮಸೂದೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತ ಬಳಿಕ ಇನ್ನು ಮುಂದೆ ಆಂಧ್ರ ಪ್ರದೇಶದಲ್ಲಿ ಕಾಪು ಸಮುದಾಯದವರಿಗೆ ಶೈಕ್ಷಣಿಕವಾಗಿ ಮತ್ತು ಸರ್ಕಾರಿ ಹುದ್ದೆಗಳಲ್ಲಿ ಶೇ.5ರಷ್ಟು ಮೀಸಲಾತಿ ದೊರೆಯಲಿದೆ.
ಈ ಹಿಂದೆ ಕಾಪು ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಕಳೆದ ಜನವರಿ ತಿಂಗಳಲ್ಲಿ ಕಾಪು ನಾಯಕ ಮುದ್ರಗಡ ಪದ್ಮನಾಭಂ ನೇತೃತ್ವದಲ್ಲಿ ಭಾರಿ "ಕಾಪು ಘರ್ಜನೆ" ಹೆಸರಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ತುನಿ ರೈಲು ನಿಲ್ದಾಣದಲ್ಲಿ ಇಡೀ ರೈಲಿಗೆ ಆಕ್ರೋಶಿತ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ಈ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.