ದೇಶ

ಆರ್ಥಿಕ ಚೇತರಿಕೆಯನ್ನು ಈಗಲೇ ಖಚಿತಪಡಿಸಲು ಸಾಧ್ಯವಿಲ್ಲ: ಜಿಡಿಪಿ ಏರಿಕೆ ಬಗ್ಗೆ ಡಾ.ಸಿಂಗ್ ಪ್ರತಿಕ್ರಿಯೆ

Srinivas Rao BV
ಸೂರತ್: ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಆರ್ಥಿಕತೆ ಚೇತರಿಕೆ ಕಂಡಿರುವುದನ್ನು ಈಗಲೇ ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 
ಚುನಾವಣೆಗೆ ಸಜ್ಜುಗೊಂಡಿರುವ ಗುಜರಾತ್ ನ ಸೂರತ್ ನಲ್ಲಿ ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿರುವ ಮಾಜಿ ಪ್ರಧಾನಿ ಡಾ.ಸಿಂಗ್, ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಜಿಡಿಪಿ ಶೇ.6.3 ರಷ್ಟಕ್ಕೆ ಪುಟಿದಿರುವುದು ಸ್ವಾಗತಾರ್ಹ, ಆದರೆ ಸಣ್ಣ  ಹಾಗೂ ಮಧ್ಯಮ ಕ್ಷೇತ್ರಗಳು ನೋಟು ನಿಷೇಧ ಹಾಗೂ ಆತುರದ ಜಿಎಸ್ ಟಿಯ ಜಾರಿಯಿಂದ ಎದುರಿಸಿರುವ ನಷ್ಟವನ್ನು  ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಗಣನೆಗೆ ತೆಗೆದುಕೊಂಡಿಲ್ಲ, ಆದ್ದರಿಂದ ಜಿಡಿಪಿ ಏರಿಕೆಯ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿರುವ ಸಿಎಸ್ ಒ ಇನ್ ಫಾರ್ಮಲ್ ಸೆಕ್ಟರ್ ನ ಮೇಲೆ ನೋಟು ನಿಷೇಧ ಹಾಗೂ ಜಿಎಸ್ ಟಿಯ ಜಾರಿಯ ಪರಿಣಾಮವನ್ನು ಇಸರಿಯಾಗಿ ಗಣನೆಗೆ ತೆಗೆದುಕೊಂಡಿಲ್ಲ, ಇನ್ನೂ ಒಂದಷ್ಟು ಆತಂಕಗಳಿವೆ  ಎಂದು ಕೆಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿರುವ ಸಿಂಗ್ ಖ್ಯಾತ ಅರ್ಥಶಾಸ್ತ್ರಜ್ಞ ಗೋವಿಂದ್ ರಾವ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಕೃಷಿಯ ನಂತರ ನಿರ್ಮಾಣ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನಷ್ಟ ಸಂಭವಿಸಿದೆ ಎಂದು ಸಿಂಗ್ ಹೇಳಿದ್ದು, ಕೇಂದ್ರ ಸರ್ಕಾರದ ನೀತಿಗಳು ಉದ್ಯಮದ ಬೆನ್ನೆಲುಬನ್ನೇ ಮುರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
SCROLL FOR NEXT