ದೇಶ

ವೈದ್ಯಕೀಯ ನಿರ್ಲಕ್ಷ್ಯ: ಮ್ಯಾಕ್ಸ್ ಆಸ್ಪತ್ರೆಗೆ ನೋಟಿಸ್ ನೀಡಿದ ದೆಹಲಿ ಪೊಲೀಸರು

Lingaraj Badiger
ನವದೆಹಲಿ: ಅವಧಿಪೂರ್ವ ಜನಿಸಿದ ಅವಳಿ ಮಕ್ಕಳ ಪೈಕಿ ಒಂದು ಮಗು ಬದುಕ್ಕಿದ್ದರೂ ಎರಡೂ ಮೃತಪಟ್ಟಿವೆ ಎಂದು ಪೋಷಕರಿಗೆ ನೀಡಿದ್ದ ದೆಹಲಿ ಪ್ರತಿಷ್ಠ ಖಾಸಗಿ ಆಸ್ಪತ್ರೆ ಮ್ಯಾಕ್ಸ್ ಗೆ ಭಾನುವಾರ ದೆಹಲಿ ಪೊಲೀಸರು ನೋಟಿಸ್ ನೀಡಿದ್ದು, ನಿರ್ಲಕ್ಷ್ಯ ವಹಿಸಿದ ಆಸ್ಪತ್ರೆ ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಘಟನೆ ನಡೆದ ದಿನದಂದು ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ಇತರೆ ಸಿಬ್ಬಂದಿ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ವಿಚಾರಣೆಗೆ ಹಾಜರಾಗುವಂತೆ ಆಸ್ಪತ್ರೆ ಆಡಳಿತ ಮಂಡಳಿಗೆ ಪೊಲೀಸರು ಸೂಚಿಸಿದ್ದಾರೆ.
ನಿನ್ನೆಯಷ್ಟೇ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು, ಮ್ಯಾಕ್ಸ್ ಆಸ್ಪತ್ರೆ ಇದೇ ರೀತಿ ನಿರ್ಲಕ್ಷ್ಯ ಮುಂದುವರೆಸಿದರೆ ಆಸ್ಪತ್ರೆಯ ಪರವಾನಗಿ ರದ್ದು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಈಗ ಪೊಲೀಸರು ಆಸ್ಪತ್ರೆಗೆ ನೋಟಿಸ್ ನೀಡಿದ ಬಿಸಿ ಮುಟ್ಟಿಸಿದ್ದಾರೆ.
ಕಳೆದ ಶುಕ್ರವಾರ ಮ್ಯಾಕ್ಸ್ ಆಸ್ಪತ್ರೆ ಆಗತಾನೆ ಜನಿಸಿದ ಅವಳಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಮಕ್ಕಳ ಮೃತದೇಹಗಳನ್ನು ಪೋಷಕರಿಗೆ ಹಸ್ತಾಂತರಿಸಿತ್ತು. ಪೋಷಕರು ಮಕ್ಕಳ ಅಂತ್ಯಸಂಸ್ಕಾರಕ್ಕೆ ಸ್ಮಶಾನಕ್ಕೆ ತೆರಳಿದ್ದಾಗ ಒಂದು ಮಗು ಬದುಕಿರುವುದು ಕಂಡು ಬಂದಿದೆ. ತಕ್ಷಣ ಪೋಷಕರು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಪೋಷಕರು ಮತ್ತು ಸಂಬಂಧಿಕರು ಮ್ಯಾಕ್ಸ್​ ಆಸ್ಪತ್ರೆಯ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸಿ ಆಸ್ಪತ್ರೆಯ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪೊಲೀಸರಿಗೆ ದೂರು ಸಹ ನೀಡಿದ್ದರು.
SCROLL FOR NEXT