ನವದೆಹಲಿ: ಕಾನೂನು ಸಲಹೆ ಪಡೆಯುವುದು ಇಂದು ಅತ್ಯಂತ ದುಬಾರಿ ವ್ಯವಹಾರವಾಗಿದೆ ಎಂದ ಸುಪ್ರೀಂ ಕೋರ್ಟ್ ಈ ಸಂಬಂಧ ತನ್ನ ಆತಂಕ ಹೊರಹಾಕಿದೆ.
ವಕೀಲರು ತಮ್ಮ ಕಕ್ಷಿದಾರರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಬಡವರಿಗೆ ನ್ಯಾಯ ದೊರಕದ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ವಕೀಲರ ಶುಲ್ಕವನ್ನು ನಿಯಂತ್ರಣ ಮಾಡುವ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಸಲಹೆ ಮಾಡಿದೆ.
ವಕೀಲರ ಶುಲ್ಕಕ್ಕೆ ಕನಿಷ್ಠ ಹಾಗೂ ಗರಿಷ್ಠ ಮಿತಿಗಳನ್ನು ನಿಗದಿ ಪಡಿಸಬೇಕೆಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಆದರ್ಶ್ ಕೆ. ಗೋಯಲ್ ಮತ್ತು ಯು.ಯು. ಲಲಿತ್ ಅವರನ್ನೊಳಗೊಂಡ ಪೀಠ ಈ ಸಲಹೆ ನೀಡಿದ್ದು ಕಾನೂನು ವೃತ್ತಿಯಲ್ಲಿರುವವರಿಗಾಗಿ ನೀತಿ ಸಂಹಿತೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದಿದೆ. ಕಾನೂನು ಆಯೋಗದ ವರದಿ, ಸುಪ್ರೀಂ ಕೋರ್ಟ್ ನ ಹಳೆಯ ತೀರ್ಪುಗಳನ್ನು ಈ ವೇಳೆ ಪೀಠವು ಉಲ್ಲೇಖಿಸಿದೆ.
ಆರ್ಥಿಕವಾಗಿ ಸದೃಢರಲ್ಲದವರು ಸಮರ್ಥ ವಕೀಲರ ಸಲಹೆ ಪಡೆಯುವುದು ಕಠಿಣವಾಗುತ್ತಿದೆ. ತೀರ್ಪಿನ ಫಲಾನುಭವಿಗಳ ಲಾಭದಲ್ಲಿ ಪಾಲು ಪಡೆಯುವ ವಕೀಲರ ಪ್ರವೃತ್ತಿ ಖಂಡನೀಯ ಎಂದಿರುವ ನ್ಯಾಯಾಲಯ ವಕೀಲರು ವೃತ್ತಿ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದಿದೆ. ಇದೇ ವೇಳೆ ಹೆಚ್ಚಿನ ಶುಲ್ಕ ಪಡೆದು ಅನ್ಯಾಯವೆಸಗುವ ವಕೀಲರ ವಿರುದ್ಧ ಕ್ರಮ ಜರುಗಿಸಬೇಕೆಂದು ನ್ಯಾಯಾಲಯ ಸಲಹೆ ಮಾಡಿದೆ.