ದೇಶ

ಪ್ರಧಾನಿ ಮೋದಿ ಗುಜರಾತ್ ಜನತೆಗೆ ದ್ರೋಹ ಮಾಡಿದ್ದಾರೆ: ಮನನೋಹನ್ ಸಿಂಗ್

Lingaraj Badiger
ರಾಜಕೋಟ್: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು, ಮತ್ತೊಮ್ಮೆ ನೋಟ್ ನಿಷೇಧದ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ ಮತ್ತು ಪ್ರಧಾನಿ ಮೋದಿ ಗುಜರಾತ್ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ಗುರುವಾರ ಆರೋಪಿಸಿದ್ದಾರೆ.
ಇಂದು ಗುಜರಾತ್ ನ ರಾಜಕೋಟ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ, ರಾಜಕೋಟ್ ಮತ್ತು ಗುಜರಾತ್ ಪ್ರಧಾನಿ ಮೋದಿ ಮೇಲೆ ಬಹಳಷ್ಟು ಭರವಸೆ ಇಟ್ಟುಕೊಂಡಿದ್ದರು ಮತ್ತು ನೋಟ್ ನಿಷೇಧದಿಂದ ತಮ್ಮ ಜೀವನ ಬದಲಾಗುತ್ತೆ ಎಂದು ನಂಬಿದ್ದರು. ಆದರೆ ಅವರ ನಂಬಿಕೆ ಮತ್ತು ಭರವಸೆಗೆ ಮೋದಿ ದ್ರೋಹ ಮಾಡಿದ್ದಾರೆ ಎಂದರು.
ಶೇ.99ರಷ್ಟು ನಿಷೇಧಿತ ನೋಟುಗಳು ಬ್ಯಾಂಕ್ ಗಳಿಗೆ ವಾಪಸ್ ಬಂದಿವೆ ನಿಜ. ಆದರೆ ಇದರಿಂದ ಸಾಕಷ್ಟು ಕಪ್ಪು ಹಣ ಬಿಳಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಮತ್ತು ಭ್ರಷ್ಟಾಚಾರ ಸಹ ಮುಂದುವರೆದಿದೆ. ನೋಟ್ ನಿಷೇಧದಿಂದಾಗಿ ಉದ್ಯೋಗ ವಲಯದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದರು.
ನೋಟ್ ನಿಷೇಧ ಒಂದು ಮಹಾ ಪ್ರಮಾದ. ಇದರಿಂದಾಗಿ ಬೃಹತ್‌ ಪ್ರಮಾಣದ ಕಪ್ಪು ಹಣ ಬಿಳಿಯಾಗುವುದಕ್ಕೆ ಉತ್ತಮ ಅವಕಾಶ ಕಲ್ಪಿಸಲಾಯಿತು. ದುರದೃಷ್ಟವಶಾತ್‌ ಅದೇ ವೇಳೆ ಲಕ್ಷಾಂತರ ಜನರ ಜೀವನಾಧಾರ ಉದ್ಯೋಗಗಳನ್ನು ಅದು ಕಸಿದು ಕೊಂಡು ಅಸಂಖ್ಯರನ್ನು ಬೀದಿಪಾಲು ಮಾಡಿತು. ನೋಟು ಅಮಾನ್ಯಗೊಂಡಾಗ ಜನರು ಹಣಕ್ಕಾಗಿ ಕ್ಯೂನಲ್ಲಿ ನಿಂತದ್ದನ್ನು ಮತ್ತು ನೂರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡದ್ದನ್ನು ತಾನು ಇಂದಿಗೂ ಮರೆತಿಲ್ಲ ಎಂದು ಮನಮೋಹನ್‌ ಸಿಂಗ್‌ ಹೇಳಿದರು.
SCROLL FOR NEXT