ನವದೆಹಲಿ: ಗುಜರಾತ್ ನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಬಗ್ಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನೀಡಿರುವ ಪ್ರಣಾಳಿಕೆ ಆರ್ಥಿಕ ದೃಷ್ಟಿಯಿಂದ ಅಸಾಧ್ಯವಾದದ್ದು ಎಂದು ಹೇಳಿದ್ದಾರೆ.
ಅಭಿವೃದ್ಧಿಯ ಮಾದರಿಗಳೇ ಇಲ್ಲದೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದು ಆರ್ಥಿಕ ದೃಷ್ಟಿಯಿಂದ ಅಸಾಧ್ಯವಾದದ್ದು, ವಾರ್ಷಿಕವಾಗಿ ಗುಜರಾತ್ 90,000 ಕೋಟಿ ರೂಪಾಯಿ ಆದಾಯ ಗಳಿಸಲಿದೆ. ಕಾಂಗ್ರೆಸ್ ಪಕ್ಷ 20,000 ಕೋಟಿಯಷ್ಟು ತೆರಿಗೆ ಮನ್ನಾ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದೆ. ಇದರಿಂದಾಗಿ ರಾಜ್ಯದ ಆದಾಯ 70,೦೦೦ ಕೋಟಿಗೆ ಇಳಿಕೆಯಾಗಲಿದೆ ಎಂದು ಅರುಣ್ ಜೇಟ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಗೆಲುವು ಸಾಧ್ಯವಿಲ್ಲದ ಕಾರಣ ಈ ರೀತಿಯ ದುಬಾರಿ, ಜನಪ್ರಿಯ ಯೋಜನೆಗಳನ್ನು ಘೋಷಿಸುವ ನಿರ್ಧಾರ ಕೈಗೊಂಡಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.