ಗೂಗಲ್ ಡೂಡಲ್ ಮೂಲಕ ಛಾಯಾಗ್ರಹಣ ಪತ್ರಕರ್ತೆ ಹೊಮೈ ವ್ಯಾರಾವಲ್ಲಾಗೆ ಗೌರವ
ನವದೆಹಲಿ: ಭಾರತದ ಮೊದಲ ಛಾಯಾಗ್ರಹಣ ಪತ್ರಕರ್ತೆ ಹೊಮೈ ವ್ಯಾರಾವಲ್ಲಾ ಅವರ 104ನೇ ಜಯಂತಿ ಅಂಗವಾಗಿ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
1913ರ ಡಿಸೆಂಬರ್ 9ರಂದು ಗುಜರಾತ್ ನ ನವ್ಸಾರಿಯಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ ವೈರಾವಲ್ಲಾ ತನ್ನ ಬಾಲ್ಯದ ದಿನಗಳನ್ನು ತಂದೆಯ ಜೊತೆ ಊರಿಂದೂರಿಗೆ ಅಲೆದಾಡುತ್ತಾ ಕಳೆದರು. ಅವರ ತಂದೆ ನಾಟಕ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ಮುಂಬೈಗೆ ಹೋದ ನಂತರ ಮುಂಬೈ ವಿಶ್ವವಿದ್ಯಾಲಯ ಮತ್ತು ಸರ್ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಅಧ್ಯಯನ ಮಾಡಿ ನಂತರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಮಣೇಕ್ಷಾ ಜಮ್ಶೇತ್ಜಿ ವ್ಯಾರವಲ್ಲಾ ಅವರನ್ನು ವಿವಾಹವಾದರು.
1930ರ ದಶಕದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ವ್ಯಾರಾವಲ್ಲಾ, ವಿಶ್ವಯುದ್ಧ 2ರ ಸಂದರ್ಭದಲ್ಲಿ ಮುಂಬೈ ಮೂಲದ ವಾರ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಅಂದು ಅವರು ತೆಗೆದ ಅನೇಕ ಕಪ್ಪು ಬಿಳುಪಿನ ಛಾಯಾಚಿತ್ರಗಳು ಪ್ರಕಟವಾಗಿ ಹೆಸರು ಗಳಿಸಿದವು.
ತಮ್ಮ ಪತಿಯ ಬಳಿ ಕ್ಯಾಮರಾ, ಛಾಯಾಗ್ರಹಣದ ಕಲೆಯನ್ನು ಕಲಿತ ವ್ಯಾರಾವಲ್ಲಾ ಅಂದು ಮಹಿಳೆಯರು ಕೈ ಹಾಕದ ಕೆಲಸವಾದ ಛಾಯಾಗ್ರಹಣವನ್ನು ವೃತ್ತಿಯಾಗಿ ತೆಗೆದುಕೊಂಡರು. ಅವರಿಗೆ 2011ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿತ್ತು.
1942ರಲ್ಲಿ ಬ್ರಿಟಿಷ್ ಮಾಹಿತಿ ಸೇವೆಗೆ ಸೇರಿದ ನಂತರ ವ್ಯಾರಾವಲ್ಲಾ ಅವರ ಫೋಟೋಗಳು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು. ಅಂದಿನ ಅನೇಕ ರಾಜಕೀಯ ನಾಯಕರನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದರು. 1970ರಲ್ಲಿ ತಮ್ಮ ಪತಿಯ ನಿಧನ ನಂತರ ವ್ಯಾರವಲ್ಲಾ ಕಹಿ ಘಟನೆ ಎದುರಿಸಿ ಛಾಯಾಗ್ರಹಣ ವೃತ್ತಿಯನ್ನು ಬಿಡಲು ನಿರ್ಧರಿಸಿದರು. ಅವರು 2012ರ ಜನವರಿ 15ರಂದು 98ನೇ ವಯಸ್ಸಿನಲ್ಲಿ ನಿಧನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics