ದೇಶ

ಬ್ಯಾಂಕ್ ಖಾತೆ, ಪ್ಯಾನ್, ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಗಡುವು ಅನಿರ್ದಿಷ್ಟಾವಧಿಗೆ ವಿಸ್ತರಣೆ

Lingaraj Badiger
ನವದೆಹಲಿ: ಬ್ಯಾಂಕ್ ಖಾತೆಗಳಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಹಾಗೂ ಮೊಬೈಲ್ ಸಂಖ್ಯೆಗೆ ಆಧಾರ ಲಿಂಕ್ ಮಾಡಲು ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಿತ್ತು. ಆದರೆ ಈಗ ಅದನ್ನು ಅನಿರ್ದಿಷ್ಟಾವಧಿವರೆಗೆ ವಿಸ್ತರಿಸಿದೆ.
ಆಧಾರ್ ಬಗ್ಗೆ ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಇರುವುದರಿಂದ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಒಳಪಟ್ಟ ಕಂದಾಯ ಇಲಾಖೆ ನಿನ್ನೆ ಗಡುವು ವಿಸ್ತರಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಅಲ್ಲದೆ ಸದ್ಯದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದೆ.
ಅಧಿಸೂಚನೆಯಲ್ಲಿ ಆಧಾರ್‌ ನಂಬರ್‌ ಮತ್ತು ಪ್ಯಾನ್ ನಂಬರನ್ನು 2017ರ ಡಿಸೆಂಬರ್‌ 31ರ ಒಳಗೆ ಸಲ್ಲಿಸಿ ಎಂಬ ಪದಗಳನ್ನು ತೆಗೆದು ಆಧಾರ್‌ ನಂಬರ್‌, ಪ್ಯಾನ್‌ ಅಥವಾ ಫಾರ್ಮ್ ನಂಬರ್‌ 60ನ್ನು ಕೇಂದ್ರ ಸರ್ಕಾರವು ಸೂಚಿಸಲಿರುವ ದಿನಾಂಕದ ಒಳಗೆ ಸಲ್ಲಿಸಿ ಎಂಬ ಪದಗಳನ್ನು ಬಳಸಲಾಗಿದೆ.
ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಪ್ರಕಾರ ಪ್ಯಾನ್ ನಂಬರ್ ಹಾಗೂ ಆಧಾರ್ ಸಂಖ್ಯೆಯನ್ನು ಸರ್ಕಾರದ ಸೇವೆಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗಿದ್ದು, ಹೊಸ ಬ್ಯಾಂಕ್ ಖಾತೆ ತೆರೆಯಲು ಹಾಗೂ ಚಾಲ್ತಿಯಲ್ಲಿರುವ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು.
ವಿಶೇಷ ಗುರುತಿನ ಚೀಟಿ ಪ್ರಾಧಿಕಾರ ಸಾರ್ವಜನಿಕರಿಗೆ ಆಧಾರ್ ಸಂಖ್ಯೆಯನ್ನು ವಿತರಿಸುತ್ತಿದೆ. ಆದಾಯ ತೆರಿಗೆ ಇಲಾಖೆ ಮೂಲಕ ಭಾರತದ ನಾಗರಿಕರು ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಆಧಾರ್ ಅನ್ನು ಎಲ್ಲಾ ಸೇವೆಗಳಿಗೆ ಕಡ್ಡಾಯ ಮಾಡಿರುವ ಸರ್ಕಾರದ ಕ್ರಮ ಸೂಕ್ತವಲ್ಲ ಅಂತಾ ಸುಪ್ರೀಂ ಕೋರ್ಟ್ ಗೂ ಅರ್ಜಿ ಸಲ್ಲಿಸಲಾಗಿದೆ.
SCROLL FOR NEXT