ಅಮರನಾಥ ದೇವಾಲಯದಲ್ಲಿ ಮಂತ್ರ ಹೇಳುವಂತಿಲ್ಲ, ಘಂಟಾನಾದ ಮಾಡುವಂತಿಲ್ಲ, ಹಸಿರು ಪೀಠ ಆದೇಶ
ನವದೆಹಲಿ: ಅಮರನಾಥ ಗುಹೆಯಲ್ಲಿ ಮಂತ್ರಗಳ ಪಠಣಕ್ಕೆ ರಾಷ್ಟ್ರೀಯ ಹಸಿಉರು ಪೀಠವು ನಿಷೇಧ ಹೇರಿದೆ. ಅಮರನಾಥ ಗುಹಾ ದೇವಾಲಯ ಆಡಳಿತ ಮಂಡಳಿಗೆ ಈ ಕುರಿತಂತೆ ಪೀಠವು ಆದೇಶ ನೀಡಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯಾತ್ರಾರ್ಥಿಗಳಿಗೆ ಸಾಕಷ್ಟು ಮೂಲಭೂತ ಸೌಕರ್ಯ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಹಸಿರು ಪೀಠವು ಕಳೆದ ತಿಂಗಳು ಅಮರನಾಥ ದೇವಾಲಯ ಮಂಡಳಿಯಿಂದ ಆಡಳಿತವನ್ನು ತಾನು ವಹಿಸಿಕೊಂಡಿತ್ತು. ಹೀಗೆ ಆಡಳಿತ ತನ್ನ ವಶಕ್ಕೆ ಬಂದ ಬಳಿಕ ಪೀಠ ಈ ಆದೇಶ ಹೊರಡಿಸಿದೆ.
ಬುಧವಾರ, ಮುಖ್ಯ ನ್ಯಾಯಮೂರ್ತಿ ಸ್ವಾತಂತರ್ ಕುಮಾರ್ ನೇತೃತ್ವದ ಎನ್ ಜಿಟಿ ಪೀಠವು ಗುಹಾ ದೇವಾಲಯದಲ್ಲಿ ಘಂಟಾನಾದ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರುಗಳಷ್ಟು ಎತ್ತರದಲ್ಲಿರುವ ಈ ದೇವಾಲಯ ಪ್ರವೇಶಿಸಲು ಭಕ್ತರು ತಮ್ಮ ಮೊಬೈಲ್ ಮತ್ತು ಇತರೆ ಲಗೇಜ್ ಗಳನ್ನು ಕೊನೆಯ ಚೆಕ್ ಪೋಸ್ಟ್ ನಲ್ಲಿ ಇರಿಸಬೇಕಾಗಿತ್ತು
ದೇವಾಲಯದ ಆವರಣದಲ್ಲಿ ಯಾವ ಮಂತ್ರೋದ್ಘಾರವಾಗಲಿ, ಜೈಕಾರಗಳಾಗಲೀ ಕೇಳಿ ಬರಬಾರದೆಂದು ಹಸಿರು ಪೀಠವು ಹೇಳಿದ್ದು ದೇವಾಲಯದ ಆಡಳಿತ ವಹಿಸಿಕೊಂಡವರು ಈ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದಿದೆ. ಅಲ್ಲದೆ ಕಡೆಯ ಚೆಕ್ ಪೋಸ್ಟ್ ನಿಂದ ನಂತರ ಜನರು ಒಂದೇ ಸಾಲಿನಲ್ಲಿ ಚಲಿಸಿ ದೇವಾಲಯವನ್ನು ಪ್ರವೇಶಿಸಬೇಕೆಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.