ವಾಷಿಂಗ್ಟನ್: ಭಾರತ, ಆಫ್ಘಾನಿಸ್ತಾನದ ಅತ್ಯಂತ ವಿಶ್ವಾಸಾರ್ಹ ಪ್ರಾದೇಶಿಕ ಪಾಲುದಾರ ಎಂದು ಅಮೆರಿಕ ಬಣ್ಣಿಸಿದೆ.
ಭಾರತ ಮತ್ತು ಆಫ್ಘಾನಿಸ್ತಾನದ ನಡುವಿನ ಸೌಹಾರ್ಧ ಸಂಬಂಧ ಕುರಿಂತೆ ಶುಕ್ರವಾರ ಅಮೆರಿಕ ಕಾಂಗ್ರೆಸ್ ಗೆ ಪೆಂಟಗನ್ ಮಾಹಿತಿ ನೀಡಿದ್ದು, ಈ ವೇಳೆ ಭಾರತ, ಆಫ್ಘಾನಿಸ್ತಾನದ ಅತ್ಯಂತ ವಿಶ್ವಾಸಾರ್ಹ ಪ್ರಾದೇಶಿಕ ಪಾಲುದಾರ ಎಂದು ಬಣ್ಣಿಸಿದೆ. ಇದೇ ವೇಳೆ ಯುದ್ಧ ಪೀಡಿತ ದೇಶಕ್ಕೆ ಭಾರತ ನೀಡುವ ಹೆಚ್ಚುವರಿ ಆರ್ಥಿಕ, ವೈದ್ಯಕೀಯ ಹಾಗೂ ನಾಗರಿಕ ನೆರವು ಶ್ಲಾಘನೀಯ ಎಂದು ಪೆಂಟಗನ್ ಸ್ಪಷ್ಟ ಹೇಳಿದೆ.
ಅಮೆರಿಕ ಕಾಂಗ್ರೆಸ್ ಗೆ ಪೆಂಟಗನ್ ನೀಡಿರುವ "ಆಫ್ಘಾನಿಸ್ತಾನದಲ್ಲಿ ಸ್ಥಿರತೆ ಮತ್ತು ಭದ್ರತೆ ವಿಸ್ತರಣೆ" ಎಂಬ ವರದಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದು, "ಭಾರತ ಆಫ್ಘಾನಿಸ್ತಾನದ ವಿಶ್ವಾಸಾರ್ಹ ಪ್ರಾದೇಶಿಕ ಪಾಲುದಾರ ದೇಶವಾಗಿದ್ದು, ಈ ಪ್ರದೇಶದಲ್ಲಿ ಗರಿಷ್ಠ ಅಭಿವೃದ್ಧಿ ನೆರವನ್ನು ನೀಡುತ್ತಿದೆ" ಎಂದು ಅಭಿಪ್ರಾಯಪಟ್ಟಿದೆ. ಅಂತೆಯೇ ಭಾರತದ ಅಭಿವೃದ್ಧಿ ನೆರವಿನಲ್ಲಿ ಮುಖ್ಯವಾಗಿ ನಾಗರಿಕ ಅಭಿವೃದ್ಧಿ ಯೋಜನೆಗಳು ಸೇರಿದ್ದು, ಆಫ್ಘಾನಿಸ್ತಾನ- ಭಾರತ ಸ್ನೇಹ ಅಣೆಕಟ್ಟು ಮತ್ತು ಅಫ್ಘನ್ ಸಂಸತ್ ಭವನ ನಿರ್ಮಾಣ ಮುಖ್ಯವಾದವು ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ವರದಿಯಲ್ಲಿ ಭಾರತ-ಆಫ್ಘನ್ ಸೇನಾ ಸಂಬಂಧದ ಕುರಿತು ಬೆಳಕು ಚೆಲ್ಲಲಾಗಿದ್ದು. ಆಫ್ಘನ್ ಅಧಿಕಾರಿಗಳಿಗೆ ಭಾರತ ಮಹತ್ವದ ತರಬೇತಿಯನ್ನೂ ನೀಡುತ್ತಿದೆ. ಪ್ರತೀ ವರ್ಷ ಸುಮಾರು 130 ಆಫ್ಘನ್ ಅಧಿಕಾರಿಗಳು ಭಾರತಕ್ಕೆ ಮಿಲಿಟರಿ ಮತ್ತು ನಿಯೋಜನೆ ಯೋಜನೆಗಳ ತರಬೇತಿಗಾಗಿ ತೆರಳುತ್ತಿದ್ದಾರೆ ಎಂದು ವಿವರಿಸಿದೆ. ಭದ್ರತಾ ನೆರವನ್ನು ಕೂಡಾ ಭಾರತ ನೀಡುತ್ತಿದ್ದು, ನಾಲ್ಕು ಎಂಐ- 35 ವಿಮಾನಗಳನ್ನು ಭಾರತ ಆಫ್ಘಾನಿಸ್ತಾನಕ್ಕೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.