ಶೇಕ್ ಹಸೀನಾ-ಅಶೋಕ್ ಕುಮಾರ್ ತಾರಾ
ನವದೆಹಲಿ: ವಿಜಯ್ ದಿವಸ್ ಹಾಗೂ ಬಾಂಗ್ಲಾ ವಿಮೋಚನಾ ದಿನ ಹಿನ್ನಲೆಯಲ್ಲಿ 1971ರ ಭಾರತ-ಪಾಕ್ ಯುದ್ಧದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದ ಭಾರತದ ಮಾಜಿ ಕರ್ನಲ್ ಅಶೋಕ್ ಕುಮಾರ್ ತಾರ್ ಅವರು ಯುದ್ಧದ ಸಮಯದಲ್ಲಿ ನಡೆದ ಕೆಲ ಘಟನೆಗಳನ್ನು ಮೆಲಕು ಹಾಕಿದ್ದಾರೆ.
ಯುದ್ಧದ ವೇಳೆ ಪಾಕಿಸ್ತಾನ ಪಡೆಯು ಬಾಂಗ್ಲಾದೇಶದ ಖ್ಯಾತ ರಾಜಕಾರಣಿ ಶೇಖ್ ಮುಜಿಬುರ್ ರೆಹಮಾನ್ ಹಾಗೂ ಅವರ ಕುಟುಂಬವನ್ನು ಒತ್ತೆಯಾಳಾಗಿಟ್ಟುಕೊಂಡಿತ್ತು. ಒತ್ತೆಯಾಳಾಗಿದ್ದ ರೆಹಮಾನ್ ಕುಟುಂಬದಲ್ಲಿ ಅವರ ಪತ್ನಿ ಮತ್ತು 24 ವರ್ಷದ ಪುತ್ರಿ ಶೇಖ್ ಹಸೀನಾ(ಇಂದಿನ ಬಾಂಗ್ಲಾ ಪ್ರಧಾನಿ) ಕೂಡ ಇದ್ದರು.
ಪಾಕ್ ಸೇನೆ ರೆಹಮಾನ್ ಕುಟುಂಬವನ್ನು ಮನೆಯೊಂದರಲ್ಲಿ ಒತ್ತೆಯಾಳಾಗಿಟ್ಟುಕೊಂಡಿದ್ದು ಅಲ್ಲದೆ ಶಸ್ತ್ರಸಜ್ಜಿತ ಸೇನೆಯನ್ನೂ ನಿಯೋಜಿಸಿತ್ತು. ಈ ವೇಳೆ ಭಾರತದ ಮೇಜರ್ ಆಗಿದ್ದ ಅಶೋಕ್ ಕುಮಾರ್ ತಾರ್ ಅವರಿಗೆ ರೆಹಮಾನ್ ಕುಟುಂಬವನ್ನು ಕಾಪಾಡುವ ಹೊಣೆ ನೀಡಲಾಗಿತ್ತು. ಈ ವೇಳೆ ಮೇಜರ್ ತಮ್ಮ ಪ್ರಾಣದ ಹಂಗು ತೊರೆದು ಇಂದಿನ ಬಾಂಗ್ಲಾ ಪ್ರಧಾನಿಯ ಕುಟುಂಬವನ್ನು ರಕ್ಷಿಸಿ ಶೌರ್ಯ ಮೆರೆದಿದ್ದರು.
ಈ ಸಾಹಸಕ್ಕಾಗಿ ಅಶೋಕ್ ಕುಮಾರ್ ತಾರ್ ಅವರಿಗೆ ವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು 1994ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದರು. 2012ರಲ್ಲಿ ಬಾಂಗ್ಲಾದೇಶ ತಾರ್ ಅವರಿಗೆ ಫ್ರೆಂಡ್ ಆಫ್ ಬಾಂಗ್ಲಾದೇಶ ಪ್ರಶಸ್ತಿ ನೀಡಿ ಗೌರವಿಸಿತು.