ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷ ಮತ್ತೆ ಸೋತಿದೆಯಾದರೂ ವೋಟ್ ಮತ್ತು ಸ್ಥಾನಗಳ ಹಂಚಿಕೆಯಲ್ಲಿ ಗಣನೀಯ ಸಾಧನೆ ಮಾಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ನಾಯಕತ್ವವನ್ನು ಎನ್ ಡಿಎ ಮೈತ್ರಿಕೂಟದ ಮಿತ್ರಪಕ್ಷ ಶಿವಸೇನೆ ಮುಕ್ತಕಂಠದಿಂದ ಶ್ಲಾಘಿಸಿದ್ದು, ರಾಹುಲ್ ಗಾಂಧಿ ಉತ್ಸಾಹಿ ನಾಯಕರಾಗಿದ್ದು, ಗುಜರಾತ್ ನಲ್ಲಿ ಪಕ್ಷವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸಂಪಾದಕೀಯ ಬರೆದಿದ್ದು, ನಿರ್ಣಾಯಕ ಹಂತದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿದ್ದಾರೆ. ಪ್ರಸ್ತುತ ತಳಮಟ್ಟಕ್ಕೆ ಕುಸಿದಿರುವ ಕಾಂಗ್ರೆಸ್ ಪಕ್ಷವನ್ನು ರಾಹುಲ್ ಗಾಂಧಿ ತಮ್ಮ ಉತ್ತಮ ನಾಯಕತ್ವದ ಮೂಲಕ ಮೇಲೆತ್ತಲಿ ಎಂದು ಹಾರೈಸಿದ್ದಾರೆ. ಅಲ್ಲದೆ ಗುಜರಾತ್ ವಿಧಾನಸಭೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಬಿಜೆಪಿ ಉತ್ತಮ ಹೋರಾಟ ನೀಡುತ್ತಿದ್ದು, ಫಲಿತಾಂಶದ ಮೇಲೆ ಆಧಾರಿತವಾಗಿರದೇ ರಾಹುಲ್ ನೇತೃತ್ವದ ಕಾಂಗ್ರೆಸ್ ಪಕ್ಷ ಉತ್ತಮ ಹೋರಾಟ ನೀಡಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಇಂತಹ ಮನೋಭಾವವೇ ಕಾಂಗ್ರೆಸ್ ಪಕ್ಷದ ಹಳೆ ವೈಭವವನ್ನು ಮರಳಿ ತರಬಹುದು ಎಂದು ಹೇಳಿದ್ದಾರೆ. ಅಂತೆಯೇ ಕಳೆದ 60 ವರ್ಷಗಳಲ್ಲಿ ಭಾರತದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ. ಆದರೆ ಕಳೆದ ಮೂರು ವರ್ಷದಲ್ಲಿ ಭಾರತದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿರುವ ಪಕ್ಷ ನಡೆ ಮೂರ್ಖತನದ್ದು ಎಂದು ಟೀಕಿಸಿದ್ದಾರೆ.