ಮದುವೆ ಕಾರ್ಯಕ್ರಮದಲ್ಲಿ ಅನುಷ್ಕಾ ಶರ್ಮ-ವಿರಾಟ್ ಕೊಹ್ಲಿ
ನವದೆಹಲಿ: ಬಿಜೆಪಿ ವಿರುದ್ಧ ಅಪಹಾಸ್ಯ ಮಾಡಿದ ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೆವಾಲ, ಯುವಕ, ಯುವತಿಯರು ಮದುವೆಯಾಗುವ ಮೊದಲು ಮತ್ತು ಮದುವೆ ಮಾಡಿಕೊಳ್ಳುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಾಗ ಬಿಜೆಪಿ ಪಕ್ಷದ ಅನುಮತಿ ಕೋರಬೇಕೆಂದು ಅಣಕಿಸಿದ್ದಾರೆ.
ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಭಾರತದಿಂದ ಹೊರಗೆ ಇಟಲಿಯಲ್ಲಿ ಮದುವೆ ಮಾಡಿಕೊಂಡಿದ್ದನ್ನು ಮಧ್ಯ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಪ್ರಶ್ನೆ ಮಾಡಿದ್ದಕ್ಕೆ ಅವರು ಅಪಹಾಸ್ಯ ಮಾಡಿದ್ದಾರೆ.
ಭಾರತದಲ್ಲಿರುವ ಎಲ್ಲಾ ಯುವಕ,ಯುವತಿಯರೇ ಕೇಳಿಲ್ಲಿ, ಯಾರನ್ನು ಮದುವೆಯಾಗಬೇಕು, ಎಲ್ಲಿ ಮದುವೆಯಾಗಬೇಕು, ಮದುವೆ ಕಾರ್ಯಕ್ರಮ ಹೇಗೆ ನಡೆಯಬೇಕು ಮತ್ತು ಮದುವೆಯಲ್ಲಿ ಏನೇನು ಆಹಾರಗಳನ್ನು ಬಡಿಸಬೇಕೆಂದು ಬಿಜೆಪಿಯವರನ್ನು ಕೇಳಿ ನಿರ್ಧಾರ ಮಾಡಿ. ಇದು ಸಾರ್ವಜನಿಕ ಹಿತಾಸಕ್ತಿಯಿಂದ ಹೊರಡಿಸಲಾದ ಪ್ರಕಟಣೆ, ಅಭಿನಂದನೆಗಳು ಎಂದು ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ.
ಇಟಲಿಯ ಟಸ್ಕನಿಯಲ್ಲಿ ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಶ್ಕಾ ಶರ್ಮ ಮದುವೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಮಧ್ಯ ಪ್ರದೇಶದ ಬಿಜೆಪಿ ಶಾಸಕ ಗುನ ಪನ್ನಲಾಲ್ ಶಕ್ಯಾ, ವಿರಾಟ್ ಕೊಹ್ಲಿ ಭಾರತದಲ್ಲಿ ಹೆಸರು, ಖ್ಯಾತಿ ಗಳಿಸಿದ್ದಾರೆ. ಆದರೆ ನಮ್ಮ ದೇಶದಲ್ಲಿ ಮದುವೆಯಾಗಲು ಅವರಿಗೆ ಜಾಗವೇ ಸಿಗಲಿಲ್ಲ. ಹಿಂದೂಸ್ತಾನ ಅಷ್ಟೊಂದು ಅಸ್ಪೃಶ್ಯವೇ ಎಂದು ಕೇಳಿದ್ದರು.
ರಾಮ, ಕೃಷ್ಣ, ವಿಕ್ರಮಾದಿತ್ಯ, ಯುಧಿಷ್ಟಿರ ಮೊದಲಾದ ದೇವರೆಲ್ಲ ಇದೇ ಮಣ್ಣಿನಲ್ಲಿ ವಿವಾಹವಾಗಿದ್ದು. ನೀವೆಲ್ಲರೂ ಇಲ್ಲಿಯೇ ಮದುವೆಯಾಗಿದ್ದು. ನಾವು ಯಾರೂ ವಿದೇಶಕ್ಕೆ ಹೋಗಿ ಮದುವೆಯಾಗಲಿಲ್ಲ. ಕೊಹ್ಲಿ ಈ ದೇಶದಲ್ಲಿ ಹಣ ಗಳಿಸಿ ಅಲ್ಲಿ ಹೋಗಿ ಕೋಟಿಗಟ್ಟಲೆ ಖರ್ಚು ಮಾಡಿದರು. ದೇಶದ ಬಗ್ಗೆ ಅವರಿಗೆ ಒಂಚೂರು ಗೌರವ ಇಲ್ಲವೇ. ಇದರಿಂದ ಅವರಿಗೆ ತಮ್ಮ ದೇಶದ ಬಗ್ಗೆ ಗೌರವ, ದೇಶಭಕ್ತಿ ಇಲ್ಲ ಎಂಬುದು ಗೊತ್ತಾಗುತ್ತದೆ ಎಂದು ಶಕ್ಯ ಟೀಕಿಸಿದ್ದರು.