ಆಧ್ಯಾತ್ಮಿಕ ವಿಶ್ವ ವಿದ್ಯಾಲಯ
ಫಾರುಖಾಬಾದ್: ದೆಹಲಿಯಲ್ಲಿರುವ ಧಾರ್ಮಿಕ ಗುರು ವಿರೇಂದರ್ ದೇವ್ ದೀಕ್ಷಿತ್ ಅವರ ಆಧ್ಯಾತ್ಮಿಕ ವಿಶ್ವ ವಿದ್ಯಾಲಯದ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶನಿವಾರ ಉತ್ತರ ಪ್ರದೇಶ ಪೊಲೀಸರು ದೀಕ್ಷಿತ್ ಅವರ ಎರಡು ಆಶ್ರಮಗಳ ಮೇಲೆ ದಾಳಿ ನಡೆಸಿದ್ದು, ಅಪ್ರಾಪ್ತ ಬಾಲಕಿಯರು ಸೇರಿದಂತೆ 47 ಮಹಿಳೆಯರನ್ನು ರಕ್ಷಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಇಂದು ಸಿಕ್ತಾರ್ ಬಾದ್ ಮತ್ತು ಕಂಪಿಲ್ ನಲ್ಲಿರುವ ಎರಡು ಆಶ್ರಮಗಳ ಮೇಲೆ ದಾಳಿ ನಡೆದಿದೆ.
ದಾಳಿಗೆ ಕೈದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪಕ್ಕದ ಕಟ್ಟಡದ ಛಾವಣಿಯ ಮೂಲಕ ಆಶ್ರಮ ಪ್ರವೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಶ್ರಮದ ಮಹಿಳಾ ಕೈದಿಗಳು ಗೇಟ್ ತೆರೆಯಲು ಸರ್ಚ್ ವಾರಂಟ್ ನೀಡುವಂತೆ ಪೊಲೀಸರಿಗೆ ಒತ್ತಾಯಿಸಿ, ಪೊಲೀಸರೊಂದಿಗೆ ಕೆಲಕಾಲ ವಾಗ್ವಾದ ನಡೆಸಿದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತ್ರಿಭೂವನ್ ಸಿಂಗ್ ಅವರು ಹೇಳಿದ್ದಾರೆ.
ಸಿಕ್ತಾರ್ ಬಾದ್ ಆಶ್ರಮದಲ್ಲಿ ಓರ್ವ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದ್ದು, ಆಕೆಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಿ ಹೇಳಿಕೆ ಪಡೆಯುವುದಾಗಿ ತ್ರಿಭೂವನ್ ಸಿಂಗ್ ಅವರು ತಿಳಿಸಿದ್ದಾರೆ.
ದೀಕ್ಷಿತ್ ಅವರ ಆಶ್ರಮದಲ್ಲಿರುವ ಮಹಿಳೆಯರನ್ನು ಪಂಜರದಲ್ಲಿರುವ ಪ್ರಾಣಿಗಳಂತೆ ನೋಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics