ನವದೆಹಲಿ: 2018 ರ ಫೆ.1 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಮಂಡನೆಯಾಗಲಿದೆ. ಈ ಬಜೆಟ್ ನಲ್ಲಿ 2019 ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಉದ್ಯೋಗ ಸೃಷ್ಟಿಗಾಗಿ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಉದ್ಯೋಗ ಸೃಷ್ಟಿ 2018 ರ ಬಜೆಟ್ ನ ಮುಖ್ಯ ಗುರಿಯಾಗಿರಲಿದ್ದು ಇದಕ್ಕಾಗಿಯೇ ಸರ್ಕಾರ ಹೆಚ್ಚಿ ಒತ್ತು ನೀಡಲಿದೆ ಎಂದು ಹೇಳಿದ್ದು ಸರ್ಕಾರ ಮೂಲಸೌಕರ್ಯಾಭಿವೃದ್ಧಿಗೆ ಅನುದಾನವನ್ನು ಶೇ.50 ಕ್ಕೆ ಹೆಚ್ಚು ಮಾಡಲಿದೆ ಎಂದು ತಿಳಿದುಬಂದಿದೆ.
ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದರೆ, ಉದ್ಯೋಗ ಸೃಷ್ಟಿ ಹಾಗೂ ಅಭಿವೃದ್ಧಿ ಎರಡೂ ಉದ್ದೇಶಗಳು ಈಡೇರುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ. ಕಳೆದ ಬಜೆಟ್ ನಲ್ಲಿ ಮೂಲಸೌಕರ್ಯಾಭಿವೃದ್ಧಿಗೆ 3.96 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿತ್ತು. ಈ ಬಾರಿ ಅದು 6 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದ್ದು ನೀತಿ ಆಯೋಗವೂ ಸಹ ಮೂಲಸೌಕಾರ್ಯಾಭಿವೃದ್ಧಿಗೆ ಹೆಚ್ಚಿನ ಅನುದಾನ ಘೋಷಿಸಬೇಕೆಂದು ಹೇಳಿದೆ.
ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ, ಬಂದರು ನಿರ್ಮಾಣ ಹಾಗೂ ಇತರ ಯೋಜನೆಗಳು ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದ್ದು, ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ಶೇ.20 ರಷ್ಟು ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ.