ನವದೆಹಲಿ: ನೋಯ್ಡಾಗೆ ಭೇಟಿ ನೀಡುವ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮೂಢ ನಂಬಿಕೆ ಇದೆ. ಇದನ್ನು ಮೌಢ್ಯ ಎಂದು ಸಾಬೀತು ಮಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೋಯ್ಡಾ ಗೆ ಭೇಟಿ ನೀಡಿದ್ದಾರೆ.
ದೆಹಲಿಯ ಜನಕಪುರಿಯಿಂದ ನೋಯ್ಡಾದವರೆಗೆ ಮೆಜೆಂತಾ ಮೆಟ್ರೋ ಲೈನ್ ನಿರ್ಮಿಸಲಾಗಿದ್ದು, ಮೆಟ್ರೋ ರೈಲು ಉದ್ಘಾಟನೆಗಾಗಿ ಯೋಗಿ ಆದಿತ್ಯನಾಥ್ ನೋಯ್ಡಾಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯೋಗಿ ಆದಿತ್ಯನಾಥ್ ಸ್ವಾಗತಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವುದಕ್ಕೂ ಮುನ್ನವೇ ಅಂದರೆ ಡಿ.23 ರ ಸಂಜೆಯೇ ನೋಯ್ಡಾಗೆ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್, ನೋಯ್ಡಾಗೆ ಸಂಬಂಧಿಸಿದಂತೆ ಇದ್ದ ಮೌಢ್ಯವನ್ನು ಸುಳ್ಳು ಎಂದು ಸಾಬೀತು ಪಡಿಸುವ ನಿಟ್ಟಿನಲ್ಲಿ ಹೆಜೆ ಹಾಕಿದ್ದಾರೆ.
ಮೌಢ್ಯವನ್ನು ತೊಲಗಿಸುವ ಸಿಎಂ ಯೋಗಿ ಆದಿತ್ಯನಾಥ್ ಅವರ ನಡೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಡಳಿತದಲ್ಲಿ ಮೌಢ್ಯಕ್ಕೆ ಆಸ್ಪದವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಉಡುಗೆಯನ್ನು ನೋಡಿ ಜನರು ಆದಿತ್ಯನಾಥ್ ಆಧುನಿಕವಾಗಿಲ್ಲ ಎಂದುಕೊಳ್ಳುತ್ತಾರೆ, ಆದರೆ ಯೋಗಿ ಜಿ ಉತ್ತರ ಪ್ರದೇಶದ ಹಿಂದಿನ ಯಾವುದೇ ಮುಖ್ಯಮಂತ್ರಿಗಳೂ ಮಾಡದೇ ಇದ್ದ ಮೌಢ್ಯವನ್ನು ತೊಲಗಿಸುವ ಕೆಲಸವನ್ನು ಮಾಡಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ತಮಗೂ ನಿರ್ದಿಷ್ಟ ಪ್ರದೇಶಗಳಿಗೆ ತೆರಳದಂತೆ ಸಲಹೆ ಬರುತ್ತಿತ್ತು, ಆದರೆ ಮೌಢ್ಯಕ್ಕೆ ಆಸ್ಪದ ನೀಡದೇ ಆ ಪ್ರದೇಶಗಳಿಗೆ ಭೇಟಿ ನೀಡಿದ್ದೆ, ಈಗ ಯೋಗಿ ಆದಿತ್ಯನಾಥ್ ಅವರೂ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics