ಮನೋಹರ್ ಪರಿಕ್ಕರ್ - ಯಡಿಯೂರಪ್ಪ
ಪಣಜಿ: ಮಹದಾಯಿ ವಿವಾದ ಇತ್ಯಾರ್ಥಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವುರು ಕೇವಲ ರಾಜಕೀಯ ಗಿಮಿಕ್ ಎಂದು ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಲೇಂಕರ್ ಅವರು ಬುಧವಾರ ಹೇಳಿದ್ದಾರೆ.
ಸಿಎಂ ಪರಿಕ್ಕರ್ ಪತ್ರದ ಕುರಿತು ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿದ ಪಲೇಂಕರ್ ಅವರು, ನೆರೆ ರಾಜ್ಯಗಳೊಂದಿಗೆ ಮಹದಾಯಿ ನದಿಯ ಒಂದು ಹನಿ ನೀರು ಸಹ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.
ನಾನು ಒಬ್ಬ ಜಲ ಸಂಪನ್ಮೂಲ ಸಚಿವನಾಗಿ ನನ್ನ ನಿಲುವು ಸ್ಪಷ್ಟಪಡಿಸಿದ್ದೇನೆ. ಪರಿಕ್ಕರ್ ಅವರು ಪತ್ರದಲ್ಲಿ ಏನು ಬರೆದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಮತ್ತು ಅದರ ಪ್ರತಿಯೂ ನನಗೆ ಕಳುಹಿಸಿಲ್ಲ. ಹೀಗಾಗಿ ನೀವು ಅವರನ್ನೇ ಕೇಳಿ. ಒಂದು ವೇಳೆ ಅವರು ಪತ್ರ ಬರೆದಿದ್ದರು ಅದು ರಾಜಕೀಯ ಗಿಮಿಕ್ ಅಷ್ಟೆ. ಇದರ ಹೊರತು ನಾನು ಬೇರೆ ಏನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ನೀರಿಗಾಗಿ ನಮ್ಮ ಜನರೇ ಪರದಾಡುತ್ತಿದ್ದಾರೆ. ನಮಗೆ ನೀರಿಲ್ಲ ಎಂದ ಮೇಲೆ ಬೇರೆಯವರಿಗೆ ನೀರು ಕೊಡಲು ಹೇಗೆ ಸಾಧ್ಯ? ಮಹದಾಯಿ ನಮ್ಮ ಜೀವ. ಈ ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಕರ್ನಾಟಕಕ್ಕೆ ಒಂದು ಹನಿ ನೀರು ಬಿಡುವುದಿಲ್ಲ ಎಂದು ಗೋವಾ ಪಾರ್ವಡ್ ಪಕ್ಷದ ಪಾಲೇಂಕರ್ ಅವರು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಪರಿಕ್ಕರ್ ನಿರ್ಧಾರಕ್ಕೆ ಅವರ ಸಂಪುಟದಲ್ಲೇ ವಿರೋಧ ವ್ಯಕ್ತವಾಗಿದೆ.
ಕಳೆದ ವಾರ ಪರಿಕ್ಕರ್ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಮಾನವೀಯತೆ ದೃಷ್ಟಿಯಿಂದ ಕುಡಿಯುವ ನೀರು ಬಿಡಲು ಗೋವಾದ ತಾತ್ವಿಕ ಒಪ್ಪಿಕೆ ಇದೆ ಎಂದು ಹೇಳಿದ್ದರು.