ನವದೆಹಲಿ: ತಿಹಾರ್ ಜೈಲಿನಲ್ಲಿ ಅಂಡರ್ ವರ್ಲ್ಡ್ ಡಾನ್ ಛೋಟಾ ರಾಜನ್ ಹತ್ಯೆಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸ್ಕೆಚ್ ಹಾಕಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಗುಪ್ತಚರ ಇಲಾಖೆ ಜೈಲಿನಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳುವಂತೆ ಸೂಚನೆ ನೀಡಿದೆ.
ದಾವೂದ್ ಇಬ್ರಾಹಿಂ ನ ಸಹಾಯಕ ದೆಹಲಿಯ ಗ್ಯಾಂಗ್ ಸ್ಟರ್ ನೀರಜ್ ಬವಾನ ತನ್ನ ಸಹಾಯಕನೊಂದಿಗೆ ಮದ್ಯದ ಮತ್ತಿನಲ್ಲಿ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ ಈ ಮಾಹಿತಿ ಬಹಿರಂಗವಾಗಿದ್ದು ಜೈಲಿನಲ್ಲಿ ಛೋಟಾ ರಾಜನ್ ಗೆ ಅಪಾಯ ಎದುರಾಗದಂತೆ ಎಚ್ಚರಿಕೆ ವಹಿಸಲು ಗುಪ್ತಚರ ಇಲಾಖೆ ಹೇಳಿದೆ.
ಛೋಟಾ ರಾಜನ್ ಹತ್ಯೆಗಾಗಿಯೇ ಡಿ ಕಂಪನಿ ಬವಾನ ಗೆ ಸುಪಾರಿ ನೀಡಿದ್ದು, ಛೋಟಾ ರಾಜನ್ ಇದ್ದ ಸೆಲ್ ನಲ್ಲೇ ನೀರಜ್ ಬವಾನ ನನ್ನು ಇರಿಸಲಾಗಿತ್ತು. ಆದರೆ ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಆತನನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಿಸುವ ವೇಳೆ ನೀರಜ್ ಬಳಿ ಕೆಲವು ಮೊಬೈಲ್ ಫೋನ್ ಗಳೂ ಪತ್ತೆಯಾಗಿವೆ.