ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಬಗ್ಗೆ ಹೊಂದಿರುವ ಬದ್ಧತೆಯನ್ನು ನಾವು ಪ್ರಶ್ನಿಸಿಲ್ಲ ಮತ್ತು ದೇಶದ ಬಗ್ಗೆ ಅವರಿಗಿರುವ ಬದ್ಧತೆ ಕುರಿತು ನಮಗೆ ಅಪಾರ ಗೌರವ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಸಂಸತ್ತಿಗೆ ತಿಳಿಸಿದ್ದಾರೆ.
ಗುಜರಾತ್ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಇಂದು ಸಂಸತ್ ನ ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು.
ಈ ಕುರಿತು ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದ ಅರುಣ್ ಜೇಟ್ಲಿ ಅವರು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ದೇಶದ ಬಗ್ಗೆ ಹೊಂದಿರುವ ಬದ್ಧತೆಯನ್ನು ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಶ್ನಿಸಿಲ್ಲ. ಅಥವಾ ಪ್ರಶ್ನಿಸುವ ಉದ್ದೇಶ ಹೊಂದಿರಲಿಲ್ಲ. ಈ ಇಬ್ಬರೂ ನಾಯಕರ ಮತ್ತು ಭಾರತದ ಬಗ್ಗೆ ಅವರಿಗಿರುವ ಬದ್ಧತೆ ಕುರಿತು ನಮಗೆ ಅಪಾರ ಗೌರವ ಇದೆ ಎಂದರು.
ಅರುಣ್ ಜೇಟ್ಲಿ ಹೇಳಿಕೆಯನ್ನು ಕಾಂಗ್ರೆಸ್ ಸ್ವಾಗತಿಸಿದ್ದು, ಮೋದಿ ಅವರ ಬಗ್ಗೆ ಮಣಿಶಂಕರ್ ಅಯ್ಯರ್ ನೀಡಿದ್ದ ‘ನೀಚ’ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.
ಮೋದಿ ಹೇಳಿಕೆಗೆ ಸ್ಪಷ್ಟನೆ ನೀಡಬೇಕು ಎಂದು ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪಟ್ಟುಹಿಡಿದಿತ್ತು. ಜತೆಗೆ, ಮೋದಿ ಅವರು ಕ್ಷಮೆ ಕೇಳಬೇಕು ಎಂದೂ ಆಗ್ರಹಿಸಿತ್ತು. ಇದರಿಂದ ಕಳೆದ ಒಂದು ವಾರದಿಂದ ಕಲಾಪಕ್ಕೆ ಅಡ್ಡಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics