ದೇಶ

2017ರಲ್ಲಿ ಸದ್ದು ಮಾಡಿದ ಪ್ರಮುಖ ವಿವಾದಗಳು

Raghavendra Adiga
ಇನ್ನೇನು 2017 ಕಳೆದು 2018 ಬರುತ್ತದೆ. ಈ ಸಮಯದಲ್ಲಿ ಕಳೆದ ದಿನಗಳ ಕಡೆ ಒಮ್ಮೆ ತಿರುಗಿ ನೋಡೊದಾಗ ಹಲವಾರು ಸಂಗತಿಗಳು ನಮಗೆ ಕಾಣಲು ಸಿಗುತ್ತದೆ. ಅವುಗಳು ನಾನಾ ವೈವಿದ್ಯಗಳಿಂದಲೂ, ವಿವಾದಗಳಿಂದಲೂ ಕೂಡಿರಬಹುದು. ಆದರೆ ಎಲ್ಲವೂ ಒಂದಿಲ್ಲೊಂದು ಕಾರಣದಿಂಡ ಮಹತ್ವದ್ದಾಗಿದೆ. ಇಲ್ಲಿ ನಾವು 2017ರಲ್ಲಿ ಸದ್ದು ಮಾಡಿದ ಪ್ರಮುಖ ವಿವಾದಗಳ ಬಗೆಗೆ ಒಮ್ಮೆ ಮೆಲುಕು ಹಾಕೋಣ.
ನಾಡ ಧ್ವಜ ವಿವಾದ
ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜ ಅಗತ್ಯ ಎನ್ನುಅ ಕಾರಣಕ್ಕೆ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ  9 ಮಂದಿಯ ಸಮಿತಿ ರಚನೆ ಮಾಡಿದ್ದು ಇದು ವ್ಯಾಪಕ ಚರ್ಚೆಗೆ ನಾಂದಿಯಾಗಿತ್ತು. ಒಂದು ದೇಶಕ್ಕೆ ಒಂದು ಧ್ವಜ ಎನ್ನುವ ಸೂತ್ರದ ಹಿನ್ನೆಲೆಯಲ್ಲಿ ನೋಡಿದಾಗ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಏಕೆ ಎನ್ನುವ ಪ್ರಶ್ನೆ ಎದ್ದಿತು. ಇದೇ ವೇಳೆ ನಾಡಗೀತೆ ಇದ್ದಾಗ ನಾಡ ಧ್ವಜ ಇದ್ದರೇನು ತಪ್ಪು ಎನ್ನುವ ಅಭಿಪ್ರಾಯವೂ ಕೇಳಿಬಂದಿದೆ. ಇದೆಲ್ಲದರ ನಡುವೆ ಇದಾಗಲೇ ಮ. ರಾಮಮೂರ್ತಿಗಳು ವಿನ್ಯಾಸಗೊಳಿಸಿದ ಹಳದಿ ಕೆಂಪು ಬಣ್ಣದ ಧ್ವಜದ ವಿನ್ಯಾಸವನ್ನು ಈ ಸರ್ಕಾರ ಬದಲಿಸಲು ಹೊರಟಿದೆ ಇದು ಸರಿಯಲ್ಲ ಎನ್ನುವ ಮಾತುಗಳೂ ಬಂದವು.
ನಾಡಧ್ವಜ ವಿನ್ಯಾಸ ಮಾಡಲು ಕಾಂಗ್ರೆಸ್ ಸರ್ಕಾರ ಸಮಿತಿಯೊಂದನ್ನು ರೂಪಿಸಿದೆ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ  ವಿವಾದ ಎದ್ದಿತ್ತು. ರಾಷ್ಟ್ರೀಯ ಸುದ್ದಿ ಮಾದ್ಯಮಗಳು ಕಾಶ್ಮೀರದಂತೆ ಕರ್ನಾಟಕ ಸಹ ಪ್ರತ್ಯೇಕ ಧ್ವಜಕ್ಕೆ ಬೇಡಿಕೆಯಿರಿಸಿದೆ, ಇದು ದೇಶದ ಎಲ್ಲ ರಾಜ್ಯಗಳು ತ್ರಿವರ್ಣ ಧ್ವಜವನ್ನು ಮಾತ್ರ ಹೊಂದಬೇಕೆಂಬ ನಿಯಮಕ್ಕೆ ವಿರುದ್ಧ ಎಂದು ಸಾರಿದ್ದವು.
ಆದಫೆ ನಮ್ಮ ಮುಖ್ಯಮಂತ್ರಿಗಳು ಇದಕ್ಕೆ ಪ್ರತಿಕ್ರಯಿಸಿ ಪಾಟೀಲ ಪುಟ್ಟಪ್ಪ ಸೇರಿ ಹಲವರು ಪ್ರತ್ಯೇಕ ನಾಡ ಧ್ವಜಕ್ಕೆ ಬೇಡಿಕೆ ಇಟ್ಟಿದ್ದರು ಅದನ್ನು ಮನ್ನಿಸಿ ಈ ಸಮಿತಿ ರಚನೆಯಾಗಿದೆ. ನಾಡ ಧ್ವಜ ಹೊಂದುವುದು ರಾಷ್ಟ್ರೀಯತೆ ಅಥವಾ ದೇಶದ ಐಕ್ಯತೆಗೆ ಧಕ್ಕೆ ತರುವುದಿಲ್ಲ. ರಾಜ್ಯ ಪ್ರತ್ಯೇಕ ಧ್ವಜ ಹೊಂದಬಾರದೆಂದು ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ  ಎಂದಿದ್ದರು. ಇನ್ನು ಪ್ರಮುಖ ವಿರೋಧ ಪಕ್ಷ ಬಿಜೆಪಿ ಸರ್ಕಾರದ ವೈಫಲ್ಯ ಮುಚ್ಚಿಡಲು ಸಿದ್ದರಾಮಯ್ಯ ಪ್ರತ್ಯೇಕ ಧ್ವಜ ವಿವಾದವನ್ನು ಹುಟ್ಟುಹಾಕಿದ್ದಾರೆ ಎಂದಿತ್ತು. ದೇಶದ ಸಂವಿಧಾನದಲ್ಲಿ  ರಾಜ್ಯಗಳಿಗೆ ಪ್ರತ್ಯೇಕ ಧ್ವಜಕ್ಕೆ ಅವಕಾಶವಿಲ್ಲ.  ಇದು ಗೊತ್ತಿದ್ದೂ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ರಾಷ್ಟ್ರಧ್ವಜವನ್ನೇ ನಾವು ಬಳಸುತ್ತಿರುವಾಗ ನಾಡ ಧ್ವಜದ ಅಗತ್ಯವೇನಿದೆ ಎಂದು ಮಾಜಿ ಮುಖ್ಯಮಂತ್ರಿ  ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದರು. ‘ಪ್ರತ್ಯೇಕ ಧ್ವಜದೊಡನೆ ರಾಜ್ಯ ಸರ್ಕಾರ ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿದೆ ಎಂದು ಶಿವಸೇನೆ ವಕ್ತಾರ ಸಂಜಯ್‌ ರಾವತ್‌ ಹೇಳಿದ್ದರು.
ಕೆಪಿಎಂಇ ಕಾಯ್ದೆ ತಿದ್ದುಪಡಿ  ವಿವಾದ
ಖಾಸಗಿ ಆಸ್ಪತ್ರೆಗಳು ಬಡರೋಗಿಗಳನ್ನು ಸುಲಿಗೆ ಮಾಡುತ್ತಿದೆ ಎನ್ನುವ ಕಾರಣ ನೀಡಿ ಅವುಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ತಿದ್ದುಪಡಿ) ಮಸೂದೆ– 2017‌’ (ಕೆಪಿಎಂಇ) ಜಾರಿಗೆ ತರಲು ಮುಂದಾದಾಗ ವಿವಾದವಾಗಿತ್ತು.
ಬೆಳಗಾವಿ ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಂದರ್ಭ ಖಾಸಗಿ ವೈದ್ಯರುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದಲ್ಲದೆ ಮುಷ್ಕರ, ಪ್ರತಿಭಟನೆಗಳು ಸತತವಾಗಿ ನಡೆದವು. ಇದರ ಪರಿಣಾಮ ಮಸೂದೆಯ ಪುನರ್ ಪರಿಶೀಲನೆಗೆ ಸರ್ಕಾರವು ಅದನ್ನು ವಿಧಾನಮಂಡಲದ ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಿತ್ತು. ಆ ಸಮಿತಿ ನೀಡಿದ ಕೆಲ ಶಿಫಾರಸ್ ಗಳನ್ನು ಅಂಗೀಕರಿಸಿ ಮಸೂದೆಯಲ್ಲಿ ಕೆಲ ಅಂಶಗಳ ಮಾರ್ಪಾಟು ತರಲಾಗಿತ್ತು.
ಇದಕ್ಕೂ ಮುನ್ನ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್‌ ಸೇನ್‌ ನೇತೃತ್ವದಲ್ಲಿ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿದ್ದು ಆ ಸಮಿತಿ ನೀಡಿದ್ದ ವರದಿ ಆಧಾರದಲ್ಲಿ ತಿದ್ದುಪಡಿ ಮಸೂದೆ ರೂಪಿಸಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆ, ದವಾಖಾನೆ, ನರ್ಸಿಂಗ್‌ ಹೋಂ, ಡೆಂಟಲ್‌ ಕ್ಲಿನಿಕ್‌, ಡೆಂಟಲ್‌ ಪಾಲಿ ಕ್ಲಿನಿಕ್, ಚಿಕಿತ್ಸಾ ಪ್ರಯೋಗಾಲಯ, ಡಯಾಗ್ನೊಸ್ಟಿಕ್‌ ಕೇಂದ್ರ ಹೀಗೆ ನಾನಾ ಪ್ರಕಾರದ ವೈದ್ಯಕೀಯ ಕೇಂದ್ರಗಳಿಗೆ ಅನ್ವಯಿಸುವ ಈ ಕಾನೂನು ಆಸ್ಪತ್ರೆಗಳ ಮೇಲೆ, ವೈದ್ಯರ ಮೇಲೆ, ವೈದ್ಯಕೀಯ ಸಿಬ್ಬಂದಿ ಮೇಲೆ ಇದು ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ ಎಂಡು ಖಾಸಗಿ ವೈದ್ಯರ ಸಂಘಟನೆ ಆಕ್ಷೇಪಿಸಿತ್ತು. ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ದಂತ ವೈದ್ಯರ ಒಕ್ಕೂಟ, ಪ್ರಯೋಗಾಲಯಗಳ ಒಕ್ಕೂಟ, ಕರ್ನಾಟಕ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಸೇರಿ ಹಲವು ಸಂಘಟನೆಗಳು ಖಾಸಗಿ ವೈದ್ಯದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದವು.
ವಕೀಲರ ಕಾಯ್ದೆ ತಿದ್ದುಪಡಿ ವಿವಾದ
ವಕೀಲರ ಕಾಯ್ದೆ ತಿದ್ದುಪಡಿ ತರಲು ಉದ್ದೇಶಿಸಿದ್ದ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿ ವಕೀಲರು ರಾಜ್ಯಾದ್ಯಂತ ಪ್ರಭಟನೆ ಕೈಗೊಂಡಿದ್ದರು. ಉದ್ದೇಶಿತ ತಿದ್ದುಪಡಿಯಲ್ಲಿ ವಕೀಲರ ಪರಿಷತ್‌ಗೆ ವಕೀಲರಲ್ಲದವರನ್ನೂ ನೇಮಕ ಮಾಡಬೇಕು ಎನ್ನುವ ಅಂಶವಿದ್ದು ಇದಕ್ಕೆ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದರು.
ಭಾರತ ಸರ್ಕಾರ ವಕೀಲರ ಕಾಯ್ದೆ ತಿದ್ದುಪಡಿ ತರುವ ವಿರುದ್ಧ ವಕೀಲರು ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಿ  ಪ್ರತಿಭಟಿಸಿದ್ದರು. ನಮ್ಮ ವೃತ್ತಿ ಹಾಗೂ ಹಕ್ಕುಗಳಿಗೆ ಚ್ಯುತಿ ತರುವ ಮಸೂದೆ ಜಾರಿ ಬೇಡ ಎಂದು ಅವರು ಬೀದಿಗಿಳಿದು ಹೋರಾಟ ನಡೆಸಿದ್ದರು ಇನ್ನೊಂದು ಸಮಯದಲ್ಲಿ ಹೈಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವಂತೆ ವಕೀಲರು ಪ್ರತಿಭಟನೆ ನಡೆಸಿದ್ದರು. ಇದಕ್ಕಾಗಿ ಈ ವರ್ಷ ಎರಡು ದಿನಗಳ ಕಾಲ ಕೋರ್ಟ್ ಕಲಾಪಗಳು ನಡೆದಿರಲಿಲ್ಲ
ಪ್ರತ್ಯೇಕ ಲಿಂಗಾಯಿತ ಧರ್ಮ ವಿವಾದ
ಉತ್ತರ ಕರ್ನಾಟಕದಲ್ಲಿ ಪ್ರಬಲ ಸಾಮುದಾಯಿಕ ಶಕ್ತಿಯಾಗಿರುವ ಲಿಂಗಾಯಿತ, ವೀರಶೈವರದು ಪ್ರತ್ಯೇಕ ಧರ್ಮ. ಅವರು ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎನ್ನುವ ಮೂಲಕ ಲಿಂಗಾಯಿತರಿಗೆ ಪ್ರತ್ಯೇಕ ಧರ್ಮದ ಸ್ಥಾನ ಮಾನ ಕಲ್ಪಿಸಿಕೊಡಬೇಕು ಎನ್ನುವ ಕೂಗು ಎದ್ದಿದೆ. ೧೨ನೇ ಶತಮಾನದಲ್ಲಿ ಬಸವಣ್ಣನಿಂದ ಸ್ಥಾಪಿಸಲ್ಪಟ್ಟ ವೀರಶೈವ ಪರಂಪರೆ ಜಾತಿ, ಧರ್ಮಗಳ ಕಟ್ಟುಪಾಡನ್ನು ಮೀರಿ ಕಾಯಕನಿಷ್ಠ ಸಮಾಜವಾಗಿ ರೂಪುತಾಳಿತ್ತು. ಆದರೆ ಇಂದಿನ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕಾಗಿ ಅವರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುತ್ತೇವೆಂದು ಹೇಳಿದೆ.
ಲಿಂಗಾಯಿತ ಪ್ರತ್ಯೇಕ ಧರ್ಮದ ಸಣ್ಣ ಕೂಗು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯ ಬಳಿಕ ಸಾಕಷ್ಟು ದೊಡ್ಡದಾಗಿ ಕೇಳಿ ಬರತೊಡಗಿದ್ದು ಇಂದು ಸಾಕಷ್ಟು ಪ್ರಬಲ ಹೋರಾಟಕ್ಕೆ ನಾಂದಿಯಾಗಿದೆ. "ಲಿಂಗಾಯಿತ ಮತ್ತು ವೀರಶೈವ ಎನ್ನುವುದು ಎರಡೂ ಬೇರೆ ಬೇರೆ ಎಂದು, ಎಲ್ಲರೂ ಒಟ್ಟಾಗಿ ಬಂದರೆ, ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ" ಎಂದಿದ್ದ ಮುಖ್ಯಮಂತ್ರಿಗಳು ತಮ್ಮ ಸಂಪುಟದಲ್ಲಿರುವ ಸಚಿವ ಎಂಬಿ ಪಾಟೀಲರಿಗೆ ಈ ಕೆಲಸಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಹೇಳಿದ್ದಾರೆ.
ಸರ್ಕಾರದ ಮೇಲೆ ದಿನದಿನಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನಕ್ಕಾಗಿ ಒತ್ತಡ ಹೆಚ್ಚುತ್ತಿದ್ದು ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ದೊರಕಿಸಿಕೊಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿರುವುದು ಕಾಂಗ್ರೆದ್ ಪಕ್ಷದಲ್ಲೇ ಕೆಲವರ್ ಬೇಸರಕ್ಕೆ ಕಾರಣವಾಗಿದೆ. ಬಿಜೆಪಿ, ಜೆಡಿಎಸ್ ಇನ್ನಿತರೆ ಪಕ್ಷಗಳೂ ಸಹೀ ವಿಚಾರದಲ್ಲಿ ಯಾವ ಸ್ಪಷ್ಟ ನಿಲುವು ಕೈಗೊಳ್ಳುವಲ್ಲಿ ವಿಫಲವಾಗಿದೆ.
ಮಠಾಧೀಶರು, ಕೆಲವು ಸಾಮಾಜಿಕ ಮುಖಂಡರು ಹುಬ್ಬಳ್ಳಿ ಸೇರಿದಂತೆ ಕೆಲ ಮಹಾನಗರಗಳಲ್ಲಿ ಬೃಹತ್ ಸಮಾವೇಶ ನಡೆಸಿ ಪ್ರತ್ಯೇಕ ಲಿಂಗಾಯಿತ ಧರ್ಮ ಬೇಕೆಂದು ಹೋರಾಟ ಮುಂದುವರಿಸಿದ್ದಾರೆ. ಇನ್ನು ಜನಸಂಖ್ಯೆಯ ಆಧಾರದಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿರುವ ಲಿಂಗಾಯಿತ ಸಮುದಾಯವನ್ನು ಒಡೆದು ರಾಜಕೀಯಲಾಭ ಮಾಡಿಕೊಳ್ಳಲು ಹೊರಟಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದ್ದು ಸೂಕ್ಷ್ಮ ವಿಷಯವಾಗಿರುವ ಇದನ್ನು ಧಾರ್ಮಿಕ ಪೀಠಾಧಿಪತಿಗಳೇ ಒಗ್ಗಟ್ಟಾಗಿ ನಿರ್ವಹಿಸಿದರೆ ಮಾತ್ರ ಸಸೂತ್ರವಾಗಿ ಅಂತ್ಯ ಕಾಣಬಹುದು.
ಟಿಪ್ಪು ಜಯಂತಿ ವಿವಾದ
ಟಿಪ್ಪು ಒಬ್ಬ ಸ್ವಾತಂತ್ರ ಹೋರಾಟಗಾರ. ಅವನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದ್ದು ಕಳೆದೆರಡು ವರ್ಷಗಳಿಂದ ವಿವಾದಕ್ಕೆ ಆಸ್ಪದ ನೀಡಿತ್ತು. ಈ ವರ್ಷ ಸಹ ನವೆಂಬರ್ ಹತ್ತರಂದು ಕರ್ನಾಟಕ ಸರ್ಕಾರ ಟಿಪ್ಪು ಜಯಂತಿಯ ಆಚರಣೆಯಲ್ಲಿ ತೊಡಗಿದ್ದು ಆ ವೇಳೆ ಸಂಸದ ಅನಂತ್ ಕುಮಾರ್ ಹೆಗಡೆ ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಸೇರಿಸಬೇಡಿ, ಹಾಗೊಮ್ಮೆ ಸೇರಿಸಿದರೆ ನಾನು ಟಿಪ್ಪುವಿನ ನೈಜ ಮುಖವನ್ನು ಎಲ್ಲರೆದುರು ಬಹಿರಂಗಗೊಳಿಸುತ್ತೇನೆ ಎನ್ನುವ ಮೂಲಕ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದರು.
ಇನ್ನು ಕನ್ನಡ ವಿರೋಧಿ, ಅನ್ಯ ಧರ್ಮೀಯರ ವಿರೋಧಿಯಾಗಿದ್ದ ಟಿಪ್ಪು ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದು ಸರಿಯಲ್ಲ ಎನ್ನುತ್ತಾ ಪ್ರತಿಯೊಂದು ಹೆಜ್ಜೆಯಲ್ಲಿಯೂ ವಿರೋಧಿಸಿಕೊಂಡು ಬಂದಿದ್ದ ಬಿಜೆಪಿಯ ಕೆಲ ನಾಯಕರು ಈ ಬಾರಿಯ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಹುಬ್ಬೇರುವಂತೆ ಮಾಡಿದ್ದರು.
ಒಟ್ಟಾರೆ 2015ರಿಂದ ಪ್ರಾರಂಭವಾಗ ಈ ಸರ್ಕಾರಿ ಪ್ರಾಯೋಜಿತ ಜಯಂತಿಯ ಅದ್ದೂರಿ ಆಚರಣೆಗೆ ಈ ವರ್ಷ ರಾಜ್ಯದ ಜನತೆ ಸಾಕ್ಷಿ ಆಗಿತ್ತು.
ಮಹದಾಯಿ ವಿವಾದ
ನೀರು ಹಂಚಿಕೆ ವಿಚಾರದಲ್ಲಿ ಇತ್ತ ಕಾವೇರಿ ಹಾಗೂ ಅತ್ತ ಮಹದಾಯಿ ಎರಡೂ ಕಡೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎನ್ನುವುದು ಕನ್ನಡಿಗರ ಕೂಗು. ಉತ್ತ್ರ ಕರ್ನಾಟಕ ಅದ್ರಲ್ಲಿಯೂ ಹುಬ್ಬಳ್ಳಿ ಧಾರವಾಡ ಸೀಮೆಯ ಕುಡಿಯುವ ನೀರಿನ ಮೂಲವಾದ ಮಹದಾಯಿ ಯೋಜನೆಗೆ ಗೋವಾ ತಕರಾರು ತೆಗೆಯುತ್ತಿದ್ದು ಈ ವರ್ಷವೂ ವಿವಾದ, ಹೋರಾಟಗಳು ತಾರಕಕ್ಕೇರಿದ್ದವು.
ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾ ರ್ಯಾಲಿ ಕಾರ್ಯಕ್ರಮದಲ್ಲಿ ಬಿಎಸ್ ಯಡಿಯೂರಪ್ಪ ತಾವು ಗೋವಾ ಮನವೊಲಿಸಿ ಮಹದಾಯಿ ವಿವಾದ ಬಗೆಹರಿಸಿಕೊಡುತ್ತೇವೆಂದು ಜೇಳಿದ್ದಲ್ಲದೆ ಗೋವಾ ಮುಖ್ಯಮಂತ್ರಿಗ ಪತ್ರವನ್ನು ಬಹಿರಂಗವಾಗಿ ಓದಿದರು. ಇದರಿಂದ ಮಹದಾಯಿ ಹೋರಾಟಗಾರರು ಪತ್ರ ಬರೆಯುದರಿಂದ ವಿವಾದ ಪರಿಹಾರವಾಗುವುದಿಲ್ಲ. ಕೂಡಲೇ ವಿವಾದವನ್ನು ಪರಿಹರಿಸಿ ಎಂದು ಆಗ್ರಹಿಸಿ ಬೆಂಗಳೂರಿನ ಬಿಜೆಪಿ ಕಛೇರಿ ಎದುರು ಪ್ರತಿಭಟನೆಗೆ ಪ್ರಾರಂಭಿಸಿದ್ದರು. ಇದಲ್ಲದೆ ಡಿ.27ರಂದು ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಬಂದ್ ಗೆ ವ್ಯಾಪಕ ಬೆಂಬಲವೂ ದೊರಕಿತ್ತು.
ಇದಕ್ಕೂ ಮುನ್ನ ನರಗುಂದದಲ್ಲಿ ಕಳೆದ ಮೂರು ವರ್ಷಗಳಿಂದ ರೈತರ ನಿರಂತರ ಹೋರಾಟ, ಧರಣಿಗಳು ನಡೆಯುತ್ತಿದ್ದು ಅದಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ಅನೇಕ ಸಾಮಾಜಿಕ ಸಂಗಟನೆಗಳು ಬೆಂಬಲ ವ್ಯಕ್ತಪಡಿಸಿದ್ದರು
ಪದ್ಮಾವತಿ ವಿವಾದ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ.
ರಜಪೂತ ರಾಣಿ ಪದ್ಮಾವತಿ ವ್ಯಕ್ತಿತ್ವಕ್ಕೆ ಮಸಿ ಬಳಿಯಲಾಗಿದೆ. ಇತಿಹಾಸವನ್ನು ತಿರುಚಲಾಗಿದೆ ಎಂದು ಚಿತ್ರದ ವಿರುದ್ಧ ಆರೋಪಗಳು ಕೇಳಿವರತೊಡಗಿತು. ಟ್ವಿಟ್ಟರ್ ನಲ್ಲಿ ಚಿತ್ರದ ಪರ ವಿರೋಧ ಚರ್ಚೆಯಾಗುತ್ತಿದ್ದಾಗಲೇ ಬಾಲಿವುಡ್ ತಾರೆಯರಲ್ಲಿಯೇ ಚಿತ್ರದ ವಗೆಗೆ ವಿಭಿನ್ನ ಅಭಿಪ್ರಾಯಗಳು ಕೇಳಿಬಂದವು. 
ಚಿತ್ರವ ಬಿಡುಅಗಡೆಯನ್ನು ವಿರೋಧಿಸಿ ರಜಪೂತ್ ಕರ್ಣಿ ಸಂಘಟನೆ ರಾಜಾಸ್ಥಾನ ಸೇರಿ ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸಿತು. ಕಡೆಗೆ ಸೆನ್ಸಾರ್ ಮಂಡಳಿ ಸಹ ಚಿತ್ರ ಬಿಡುಗಡೆಗೆ ಇನ್ನೂಸ್ ಅಹಮತ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಪರ್ದ್ಮಾವತಿ ಚಿತ್ರ ಇನ್ನೂ ತೆರೆಗೆ ಬರಲಿಲ್ಲ
ಈ ನಡುವೆ ನಿರ್ದೇಶಕ ಬನ್ಸಾಲಿ ತಾವು ಸಂಸದೀಯ ಮಂಡಳಿ ಮುಂದೆ ಹಾಜರಾಗಿ ಚಿತ್ರದ ಕಥೆ ಇತಿಹಾಸವನ್ನು ಆಧರಿಸಿದ್ದಲ್ಲ, ಒಬ್ಬ ಸೂಫಿ ಕವಿಯ ಕಾವ್ಯವನ್ನು ಆಧರಿಸಿದೆ ಕತೆಯನ್ನು ತಪ್ಪಾಗಿ ಬಿಂಬಿಸಿ ಯಾರೊಬ್ಬರ ಭಾವನೆಗೂ ಧಕ್ಕೆ ತರುವುದು ನಮ್ಮ ಉದ್ದೇಶವಲ್ಲ. ಕರ್ಣಿ ಸೇನಾ ಅಥವಾ ರಜಪೂತ್ ಸಭಾ ಅವರಿಗೆ ಸಿನಿಮಾ ತೋರಿಸಲು ಸಿದ್ದವಿದ್ದೇವೆ. ಎಂದು ಸ್ಪಷ್ಟೀಕರಣ ನಿಡಿದ್ದರು.
ತ್ರಿವಳಿ ತಲಾಕ್ ವಿವಾದ
ಮುಸ್ಲಿಂ ವೈವಾಹಿಕ ನಿಯಮಗಳು ಧಾರ್ಮಿಕ ನಿಯಮಗಳಲ್ಲಿ ತ್ರಿವಳಿ ತಲಾಕ್ ಅತ್ಯಂತ ಪ್ರಮುಖವಾದದ್ದು. ತ್ರಿವಳಿ ತಲಾಖ್‌ನ ಬಗ್ಗೆ ಮುಸ್ಲಿಂ ಸಮುದಾಯದಲ್ಲೇ ಕೆಲವರ ವಿರೋಧವಿದ್ದರೂ ಧಾರ್ಮಿಕ ನಿಷ್ಠೆಯಿಂದ ಏನೂ ಮಾಡುವಂತಿರಲಿಲ್ಲ ಆದರೆ ಈ ವರ್ಷ ಎನ್ನೇ ಡಿಎ ತೃತ್ವದ ಸರ್ಕಾರ ಸಹ ಈ ಸಂಬಂಧ ಕಾನೂನು ರೂಪಿಸುವ ಬಗೆಗೆ ಚಿಂತನೆ ನಡೆಸಿತ್ತು. ಹಾಗೆಯೇ ಸುಪ್ರೀಂ ಕೋರ್ಟ್ ಸಹ ತ್ರಿವಳಿ ತಲಾಕ್ ನ್ನು ನಿಷೇಧಿಸಿ 22 ಆಗಸ್ಟ್, 2017 ಮಂಗಳವಾರ ತೀರ್ಪು ಪ್ರಕಟಿಸಿದೆ.
ಐವರು ನ್ಯಾಯಮೂರ್ತಿಗಳ  ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದ್ದು ಬಹುಮತ ಆಧಾರದಲ್ಲಿ ತ್ರಿವಳಿ ತಲಾಕ್ ರದ್ದುಗೊಂಡಿದೆ.
ಐವರು ನ್ಯಾಯಮೂರ್ತಿಗಳ  ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದ್ದು ಬಹುಮತ ಆಧಾರದಲ್ಲಿ ತ್ರಿವಳಿ ತಲಾಕ್ ರದ್ದುಗೊಂಡಿದೆ. ಹಾಗೆಯೇ ಮುಸ್ಲಿಂ ಪುರುಷ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡುವುದು ಅಪರಾಧ ಎಂದು ಪರಿಗಣಿಸುವ ‘ಮುಸ್ಲಿಂ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯು ಡಿ.28ರಂದು ಲೋಕಸಭೆಯಲ್ಲಿ ಮಂಡನೆಯಾಗಿತ್ತು.
ಹಾದಿಯಾ ವಿವಾಹ 

ಕೇರಳದ ಅಖಿಲಾ (ಹಾದಿಯಾ) ಎಂಬ ಯುವತಿಯ ಅಂತರ್‌ಧರ್ಮೀಯ ವಿವಾಹ ಪ್ರಕರಣವು ಈ ವರ್ಷ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ತಮಿಳುನಾಡಿನ ಸೇಲಂನಲ್ಲಿ ಹೋಮಿಯೋಪಥಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಅಖಿಲಾ, ಶಫಿನ್ ಜಹಾನ್ ಎಂಬ ಮುಸ್ಲಿಂ ಯುವಕನನ್ನು ಮದುವೆಯಾಗಿ ತಮ್ಮ ಹೆಸರನ್ನು ಹಾದಿಯಾ ಎಂದು ಬದಲಿಸಿಕೊಂಡಿದ್ದಳು. ಮೇಲಾಗಿ  ಮದುವೆಗೆ ಯುವತಿಯ ಪೋಷಕರ ಒಪ್ಪಿಗೆ ಇರಲಿಲ್ಲ. ಆಕೆಯ ತಂದೆ ಅಶೋಕನ್‌ ಮಗಳನ್ನು ಬಲವಂತವಾಗಿ ಮದುವೆಯಾದ ಮುಸ್ಲಿಂ ಯುವಕ ಅವಳನ್ನು ಜಿಹಾದಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು ಎಂದು ಆರೋಪಿಸಿ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು.

ಮೇ 2017ರಲ್ಲಿ ಹೈಕೋರ್ಟ್  ಶಫಿನ್‌–ಹಾದಿಯಾ ವಿವಾಹ ಅಸಿಂಧು ಎಂದು ತೀರ್ಪಿತ್ತು ಯುವತಿಯನ್ನು ಪೋಷಕರ ಬಳಿ ಕಳಿಸಿತ್ತು. ಇದನ್ನು ಪ್ರಶ್ನಿಸಿದ್ದ  ಶಫಿನ್ ಜಹಾನ್ ಸುಪ್ರೀಂ ಕೋರ್ಟ್ ಮೊರೆ ಹೋದರು. ಆಗ ಕೋರ್ಟ್ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದು ಹಾದಿಯಾ ತನ್ನ ಇಚ್ಚಿಯಿಂದಲೇ ವಿವಾಹವಾಗಿದ್ದಾಳೆಯೋ ಇಲ್ಲವೋ ಎಂದು ತನಿಖೆ ನಡೆಸಬೇಕೆಂದು ರಾಷ್ಟ್ರೀಯ ತನಿಖಾ ದಳಕ್ಕೆ ಆದೇಶ ನೀಡಿತು. ಇದಾಗಿ ನ.27, 2017ರಂದು ಹಾದಿಯಾ ನ್ಯಾಯಾಲಯಕ್ಕೆ ಖುದ್ದು ಹಾಜರಾಹಿ ತಾನು ಪತಿ ಶಫಿನ್ ಜೊತೆಗೆ ಹೋಗುವುದಾಗಿ ತಿಳಿಸಿದ್ದರು, ತನ್ನ ಹೋಮಿಯೋಪತಿ ಶಿಕ್ಷಣವನ್ನು ಮುಂದುವರಿಸುವ ಇಚ್ಚೆ ವ್ಯಕ್ತಪಡಿಸಿದ್ದರು.

ಹಾದಿಯಾ ಮನವಿ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್‌, ಸೇಲಂನಲ್ಲಿ ವ್ಯಾಸಂಗ ಮುಂದುವರೆಸಲು ಒಪ್ಪಿಗೆ ನೀಡಿದ್ದು ಆಕೆಗೆ ಅಗತ್ಯ ಭದ್ರತೆ ಒದಗಿಸಲು ಕೇರಳ ಪೋಲೀಸರಿಗೆ ಸೂಚಿಸಿತ್ತು. 

ಡೊಕ್ಲಾಂ ವಿವಾದ
ಭಾರತ ಹಾಗೂ ಭೂತಾನ್ ಗಡಿಯಲ್ಲಿನ ಡೋಕ್ಲಾಂ  ಪ್ರದೇಶ ತನ್ನದೆಂದು ಸಾರಲು ಚೀನಾ ತನ್ನ ಸೇನಾ ತುಕಡಿಗಳನ್ನು ನೇಮಿಸುವ ಮೂಲಕ ಈ ವರ್ಷ ಹೊಸ ಗಡಿ ವಿವಾದವೊಂದನ್ನು ಹುಟ್ಟು ಹಾಕಿತ್ತು. ಒಟ್ಟು ಎಪ್ಪತ್ತೆರಡು ದಿನಗಳ ಕಾಲ ಮುಂದುವರಿದ ಈ ಗಡಿ ವಿವಾದವನ್ನು ಭಾರತ ಸರ್ಕಾರ ಯಶಸ್ವಿಯಾಗಿ ಶಮನಗೊಳಿಸಿತ್ತು.
ಈ ಸಂಬಂಧ ವಿದೇಶಂಗ ಸಚಿವೆ ಸುಷ್ಮಾ ಸ್ವರಾಜ್  20-7-2017ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿ ಭೂತಾನ್ ಗಡಿ ಸೇರುವ ಭಾಗದಲ್ಲಿ ರಸ್ತೆ ನಿರ್ಮಿಸುವ ಚೀನಾ ಉದ್ದೇಶದಿಂದಾಗಿ ಗಡಿಯಲ್ಲಿಯ ಯಥಾಸ್ಥಿತಿಗೆ ಧಕ್ಕೆ ಆಗುತ್ತಿದೆ.ಜಗತ್ತಿನ ಎಲ್ಲ ದೇಶಗಳು ಭಾರತದ ನಿಲುವನ್ನು ಬೆಂಬಲಿಸುತ್ತಿವೆ  ಎಂದಿದ್ದರು    
‘ಸಣ್ಣ ದೇಶವಾದ ಭೂತಾನ್ ವಿರುದ್ಧ ಚೀನಾ ತಳೆದಿರುವ ಆಕ್ರಮಣಕಾರಿ ನಡೆಯನ್ನು ಇಡೀ ಅಂತರರಾಷ್ಟ್ರೀಯ ಸಮುದಾಯ ಗಮನಿಸುತ್ತಿದೆ' ಎಂದು ಡೋಕ್ಲಾಂ ನಲ್ಲಿ ಚೀನಾದ ಸೇನೆ ರಸ್ತೆ ನಿರ್ಮಿಸುತ್ತಿರುವ ಬಗ್ಗೆ ಭಾರತದಲ್ಲಿಯ ಭೂತಾನ್ ರಾಯಭಾರಿ ಲಿಖಿತ ಪ್ರತಿಭಟನೆ ದಾಖಲಿಸಿದ್ದರು
ಜೂನ್ ೧೮ರಿಂದ ಪ್ರಾರಂಭಗೊಂಡ ಈ ಗಡಿ ವಿವಾದದ ಕುರಿತಂತೆ ಚೀನಾ ಮಾದ್ಯಮಗಳು ಭಾರತ ಚೀನಾದ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನ ನಡೆಸಿದೆ ಎಂದು ಬರೆದಿದ್ದವು. ಆಲ್ಲದೆ ಭಾರತ್ವು ಯುದ್ಧಾಕಾಂಕ್ಷಿಯಾಗಿದೆ ಎಂದೂ ಉಲ್ಲೇಖಿಸಿದ್ದವು.
ಆದರೆ ಅಂತಿಮವಾಗಿ ಸಂಘರ್ಷದ ಕೇಂದ್ರ ಬಿಂದುವಾಗಿದ್ದ ಡೋಕ್ಲಾಂ ನಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಗೆ ಸೂಚಿಸುವ ಮೂಲಕ 28-ಆಗಸ್ಟ್ 2017 ಸೋಮವಾರ ಬಿಕ್ಕಟ್ಟು ಶಮನವಾಗಿದೆ. ಈ ವಿವಾದ ಬಗೆಹರಿಸಲು ಭಾರತ ಅನುಸರಿಸಿದ ಮಾರ್ಗ ಅಂತರ್ಷ್ಟ್ರೀಯ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
-ರಾಘವೇಂದ್ರ ಅಡಿಗ ಎಚ್ಚೆನ್.
SCROLL FOR NEXT