ದೇಶ

ಮೇಘಾಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಮಾಜಿ ಸಿಎಂ ಲಪಾಂಗ್ ವಜಾ

Vishwanath S
ನವದೆಹಲಿ: ಮಾಜಿ ಮುಖ್ಯಮಂತ್ರಿ ಡಿಡಿ ಲಪಾಂಗ್ ರನ್ನು ಮೇಘಾಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಜಾ ಮಾಡಿ ಅವರ ಸ್ಥಾನಕ್ಕೆ ಸೆಲೆಸ್ಟಿನ್ ಲಿಂಗ್ಡೊ ಅವರನ್ನು ನೇಮಕ ಮಾಡಿದ್ದಾರೆ. 
ನಿನ್ನೆಯಷ್ಟೇ ಐವರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದಿದ್ದು ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ.
ಸದ್ಯ ಸೆಲೆಸ್ಟಿನ್ ಲಿಂಗ್ಡೊ ಅವರು ಮೇಘಾಲಯದ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರ ಸಚಿವ ಸಂಪುಟದ ಸಚಿವರಾಗಿದ್ದಾರೆ. ಇದೇ ವೇಳೆ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗಾಗಿ 13 ಸದಸ್ಯರ ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ಸೆಲೆಸ್ಟೈನ್ ಲಿಂಗ್ಡೊ ಅವರನ್ನು ರಾಹುಲ್ ಗಾಂಧಿಯವರು ನೇಮಕ ಮಾಡಿದ್ದಾರೆ. ಇನ್ನು ಶಿಲ್ಲಾಂಗ್ ಸಂಸದ ವಿನ್ಸೆಂಟ್ ಹೆಚ್ ಪಾಲಾ ಅವರನ್ನು ಪಿಸಿಸಿ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 
ಮೇಘಾಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿರುವ ಡಿಡಿ ಲಪಾಂಗ್ ರನ್ನು ರಾಹುಲ್ ಗಾಂಧಿ ಪ್ರದೇಶ ಕಾಂಗ್ರೆಸ್ ಸಮಿತಿಯ ಸಲಹೆಗಾರರಾಗಿ ನೇಮಕ ಮಾಡಿದ್ದಾರೆ. 
ಮೇಘಾಲಯದ ಎಂಟು ಶಾಸಕರ ಪೈಕಿ ಐವರು ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ರಾಜಿನಾಮೆ ನೀಡಿ ಎನ್ಡಿಎ ಮಿತ್ರಪಕ್ಷವಾಗಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ಪಿಪಿ) ಸೇರಿದ್ದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎನ್ಪಿಪಿ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ. 
SCROLL FOR NEXT