ಪಾಟ್ನಾ: ಬಿಹಾರ ಸಿಬ್ಬಂದಿ ಆಯ್ಕೆ ಆಯೋಗ(ಬಿಎಸ್‍ಎಸ್‍ಸಿ) ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ 100 ವಿದ್ಯಾರ್ಥಿಗಳ ಉದ್ರಿಕ್ತ ಗುಂಪು ಬಿಎಸ್‍ಎಸ್‍ಸಿ ಕಾರ್ಯದರ್ಶಿ ಪರಮೇಶ್ವರ್ ರಾಮ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಉದ್ರಿಕ್ತ ವಿದ್ಯಾರ್ಥಿಗಳ ಗುಂಪು ಬಿಎಸ್‍ಎಸ್‍ಸಿ ಪ್ರಧಾನ ಕಚೇರಿಗೆ ನುಗ್ಗಿ ಪರಮೇಶ್ವರ್ ರಾಮ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಉದ್ರಿಕ್ತ ವಿದ್ಯಾರ್ಥಿಗಳನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ತನಿಖೆಗೆ ಆದೇಶಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರೊಂದಿಗೆ ನಾನು ಚರ್ಚೆ ನಡೆಸಿದ್ದು ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಆರೋಪ ಸಾಬೀತಾದರೆ, ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಎಸ್‍ಎಸ್‍ಸಿ ಕಾರ್ಯದರ್ಶಿ ಪರಮೇಶ್ವರ್ ರಾಮ್ ಮತ್ತು ಇನ್ನಿಬ್ಬರು ಅಧಿಕಾರಿಗಳ ಮೇಲೆ ಉದ್ರಿಕ್ತ ವಿದ್ಯಾರ್ಥಿಗಳ ಗುಂಪು ಹಲ್ಲೆ ಮಾಡಿದೆ. ಬಿಎಸ್‍ಎಸ್‍ಸಿ ಪ್ರಧಾನ ಕಚೇರಿ ಬಳಿ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ಕಚೇರಿಗೆ ನುಗ್ಗಿದ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದು ಈ ಪೈಕಿ 20 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.