ಚೆನ್ನೈ: ಎಐಎಡಿಎಂಕೆ ಖಜಾಂಚಿ ಸ್ಥಾನದಿಂದ ವಜಾ ಗೊಳಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಪನ್ನೀರ್ ಸೆಲ್ವಂ, ಯಾರಿಗೂ ನನ್ನನ್ನು ಪಕ್ಷದಿಂದ ಕಿತ್ತು ಹಾಕುವ ಹಕ್ಕಿಲ್ಲ ಎಂದು ಹೇಳಿದ್ದಾರೆ. ಈ ಎಲ್ಲಾ ಸಂಚಿನ ಹಿಂದೆ ಡಿಎಂಕೆ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.
ಮುಂದಿನ ಎಲ್ಲಾ ನಿರ್ಧಾರ ಹಾಗೂ ನಡವಳಿಕೆಗೆಳು ಸಿಎಂ ಹುದ್ದೆ ಆಕಾಂಕ್ಷಿಗಳ ಮುಖವಾಡಗಳನ್ನು ಪ್ರತಿಬಿಂಬಿಸುತ್ತವೆ ಇದು ತಮಿಳುನಾಡು ಜನತೆಗೆ ತಿಳಿಯಲಿದೆ ಎಂದು ಹೇಳಿದ್ದಾರೆ. 10 ವರ್ಷಗಳ ಹಿಂದೆ ಅಮ್ಮಾ ನನ್ನನ್ನು ಖಜಾಂಚಿಯನ್ನಾಗಿ ನೇಮಿಸಿದ್ದರು. ಆ ಹುದ್ದೆಯಿಂದ ನನ್ನನ್ನು ಕಿತ್ತು ಹಾಕುವ ಹಕ್ಕು ಯಾರಿಗೂ ಇಲ್ಲ ಎಂದು ಶಶಿಕಲಾ ವಿರುದ್ಧ ಬಂಡಾಯ ಎದ್ದಿರುವ ಪನ್ನೀರ್ ಸೆಲ್ವಂ ಹೇಳಿದ್ದಾರೆ.
ಖಜಾಂಚಿಯಾಗಿ ನಾನು ಮಾಡಿರುವ ಕೆಲಸ ಕಾರ್ಯಗಳು ಅಮ್ಮನಿಗೆ ನೆಮ್ಮದಿ ಹಾಗೂ ಸಮಾಧಾನ ತಂದು ಕೊಟ್ಟಿತ್ತು, ನನ್ನ ಹುದ್ದೆಗೆ ನಾನು ಅನ್ಯಾಯವಾಗದಂತೆ ಕೆಲಸ ನಿರ್ವಹಿಸಿದ್ದೇನೆ, ಶಶಿಕಲಾ ವರ್ತನೆ ಹಿಂದೆ ಡಿಎಂಕೆ ಮುಖಂಡ ಹಾಗೂ ವಿಪಕ್ಷ ನಾಯಕ ಎಂ,ಕೆ ಸ್ಟಾಲಿನ್ ಕೈವಾಡವಿದೆ ಎಂದು ಸೆಲ್ವಂ ದೂರಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ಯಾರು ಭಯಪಡುವ ಅವಶ್ಯಕತೆಯಿಲ್ಲ, ನಾನು ತಳ ಮಟ್ಟದಿಂದ ಬೆಳೆದು ಬಂದ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿರುವ ಸೆಲ್ವಂ ಹೊಸ ಪಕ್ಷ ಕಟ್ಟುತ್ತೀರಾ ಎಂಬ ಪ್ರಶ್ನೆಗೆ ಸ್ವಲ್ಪ ಸಮಯ ಕಾದು ನೋಡಿ ಎಂದು ಹೇಳಿದ್ದಾರೆ.