ನವದೆಹಲಿ: ಮಾಜಿ ಪ್ರಧಾನಮಂತ್ರಿಗಳ ವಿರುದ್ಧ ಪ್ರಧಾನಮಂತ್ರಿ ನರೇಂದ್ರಮೋದಿಯವರು ಕೆಟ್ಟ ಪದವನ್ನು ಬಳಕೆ ಮಾಡಿದ್ದು, ಯಾವುದೇ ವ್ಯಕ್ತಿಯ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಗುರುವಾರ ಹೇಳಿದ್ದಾರೆ.
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಕುರಿತು ಮೋದಿಯವರು ನೀಡಿದ್ದ 'ರೇನ್'ಕೋಟ್' ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಮಾಜಿ ಪ್ರಧಾನಮಂತ್ರಿಯೊಬ್ಬರ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಟ್ಟ ಪದವನ್ನು ಬಳಕೆ ಮಾಡಿದ್ದಾರೆ. ಸಂಸ್ಥೆ, ಪಕ್ಷ ಅಥವಾ ನೀತಿಗಳ ವಿರುದ್ಧ ದಾಳಿ ಮಾಡಬಹುದೇ ವಿನಃ ವೈಯಕ್ತಿಕ ದಾಳಿ ಮಾಡುವುದು ಸರಿಯಲ್ಲ. ಮೋದಿಯವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮೋದಿಯವರು ನೀಡಿದ್ದ ಹೇಳಿಕೆ ಸಂಬಂಧ ಇತರೆ ನಾಯಕರೊಂದಿಗೆ ಸಮಾಲೋಚಿಸಿ ಕ್ಷಮೆಯಾಚಿಸುವಂತೆ ಆಗ್ರಹಿಸಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ನೋಟು ನಿಷೇಧ ನಿರ್ಧಾರಕ್ಕೆ ನಿನ್ನೆಯಷ್ಟೇ ಸಮರ್ಥನೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. ಮನಮೋಹನ್ ಸಿಂಗ್ ಅವರು ಓರ್ವ ಅಸಾಧಾರಣ ಮನುಷ್ಯ. ಅವರು ಪ್ರಧಾನಿಯಾಗಿದ್ದಾಗ ಸಾವಿರಾರು ಕೋಟಿ ರುಪಾಯಿಗಳ ಭ್ರಷ್ಟಾಚಾರ ನಡೆಸಿದರೂ ಅವರ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ಇದು ನಿಜಕ್ಕೂ ಅಚ್ಚರಿಯ ವಿಷಯ. ಅವರಿಗೆ ರೇನ್ ಕೋಟ್ ಹಾಕಿ ಸ್ನಾನ ಮಾಡೋದು ಗೊತ್ತು ಎಂದು ವ್ಯಂಗ್ಯವಾಡಿದ್ದರು.