ದೇಶ

ರುಬೆಲ್ಲಾ ಲಸಿಕೆ ಹಾಕಿಸಿದ 2 ದಿನಗಳ ನಂತರ 8 ವರ್ಷದ ಬಾಲಕಿ ಸಾವು

Shilpa D

ವೆಲ್ಲೂರು: ರುಬೆಲ್ಲಾ ಲಸಿಕೆ ಹಾಕಿಸಿದ ಎರಡು ದಿನಗಳ ನಂತರ 8 ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ  ಅಂಬೂರಿನಲ್ಲಿ ನಡೆದಿದೆ. ಆದರೆ ಇದು ರುಬೆಲ್ಲಾ ಲಸಿಕೆ ಕಾರಣದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಅಂಬೂರಿನ ನಾಚರಕುಪ್ಪಂ ಪಂಚಾಯತ್ ಯೂನಿಯನ್ ಎಲಿಮೆಂಟರಿ ಶಾಲೆಯಲ್ಲಿ  ವ್ಯಾಸಂಗ ಮಾಡುತ್ತಿದ್ದ ಹರಿಪ್ರಿಯಾ ಮೃತ ದುರ್ದೈವಿ, ಫೆಬ್ರವಿರ 7 ರಂದು ಹರಿಪ್ರಿಯಾಗೆ  ಶಾಲೆಯಲ್ಲಿ ರುಬೆಲ್ಲಾ ಲಸಿಕೆ ಹಾಕಿಸಲಾಯಿತು. ಎರಡು ದಿನಗಳ ನಂತರ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತು. ನಂತರ ಕೆಮ್ಮು ನ್ಯೂಮೋನಿಯಾ ಮತ್ತು ಅಪಸ್ಮಾರಕ್ಕೆ ತಿರುಗಿದೆ. ಕೂಡಲೇ ಆಕೆಯನ್ನು ಅಂಬೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅಲ್ಲಿಂದ ವೆಲ್ಲೂರಿನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ಸೇರುವಷ್ಟರಲ್ಲಿಯೇ ಆಕೆ ಮೃತ ಪಟ್ಟಿದ್ದಳು.

ಬಾಲಕಿಯ ಪೋಷಕರು ರುಬೆಲ್ಲಾ ಲಸಿಕೆಯಿಂದಾಗಿಯೇ ತಮ್ಮ ಮಗಳು ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ. ಆದರೆ ಬಾಲಕಿ ಮರಣೋತ್ತರ ಪರೀಕ್ಷೆ ನಡೆಸಲು ಪೋಷಕರು ನಿರಾಕರಿಸಿದ್ದಾರೆ. ಹರಿಪ್ರಿಯಾ ಅಪಸ್ಮಾರದಿಂದ ಬಳಲುತ್ತಿದ್ದಳು ಹೀಗಾಗಿ ಆಕೆ ಸಾವನ್ನಪ್ಪಿರಬೇಕು. ಮರಣೋತ್ತರ ಪರೀಕ್ಷೆಯಿಂದ ಸಾವಿನ ನಿಖರ ಕಾರಣ ತಿಳಿದುಕೊಳ್ಳಬಹುದಾಗಿದೆ, ಆದರೆ ಅವರ ಪೋಷಕರು ಇದಕ್ಕೆ ಒಪ್ಪುತ್ತಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ  ಅಧಿಕಾರಿಗಳು ಹರಿಪ್ರಿಯಾ ವಾಸವಿದ್ದ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಪಡೆದ ಇತರ ಮಕ್ಕಳನ್ನು ಪರೀಕ್ಷಿಸಿದ್ದಾರೆ, ಆ ಮಕ್ಕಳೆಲ್ಲರೂ ಆರೋಗ್ಯವಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT