ದೇಶ

ನನ್ನ ಪ್ರಕರಣನ್ನು ಸಂಸತ್ತಿಗೆ ವರ್ಗಾಯಿಸಿ: ನ್ಯಾಯಮೂರ್ತಿ ಸಿ.ಎಸ್ ಕರ್ಣನ್

Shilpa D

ನವದೆಹಲಿ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು ನನ್ನ ವಿರುದ್ಧ ಪೂರ್ವಾಗ್ರಹ ಹೊಂದಿದ್ದಾರೆ. ನನ್ನ ಪ್ರಕರಣವನ್ನು ಸಂಸತ್ತಿಗೆ ವರ್ಗಾಯಿಸಬೇಕು  ಎಂದು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಕೊಲ್ಕೋತ್ತ ಹೈಕೋರ್ಟ್‌ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಹೇಳಿದ್ದಾರೆ.  

ಸುಪ್ರೀಂಕೋರ್ಟ್ ಪ್ರಧಾನ ರಿಜಿಸ್ಟಾರ್ ಅವರಿಗೆ 4 ಪುಟಗಳ ಪತ್ರ ಬರೆದಿರುವ  ಕರ್ಣನ್ ಮೇಲ್ಜಾತಿಯ ನ್ಯಾಯಮೂರ್ತಿಗಳಿಗೆ ದಲಿತ ನ್ಯಾಯಮೂರ್ತಿಯೊಬ್ಬ ಕರ್ತವ್ಯ ನಿರ್ವಹಿಸುವುದು ಬೇಕಾಗಿಲ್ಲ, ನನ್ನ ಪ್ರಕರಣವನ್ನು ಸಂಸತ್ತಿಗೆ ವರ್ಗಾಯಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮೇಲ್ಜಾತಿಯ ನ್ಯಾಯಮೂರ್ತಿಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ, ತಮಗೆ ನೀಡಿರುವ ನ್ಯಾಯಿಕ ಅಧಿಕಾರವನ್ನು ದಲಿತ ನ್ಯಾಯಮೂರ್ತಿ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ನನ್ನ ವಿರುದ್ಧ ಹೊರಡಿಸಿ ರುವ ಆದೇಶವು ಸ್ಪಷ್ಟವಾಗಿ ತೋರಿಸುತ್ತದೆ ಎಂದೂ ಅವರು ಹೇಳಿದ್ದಾರೆ.

ನಾನು ಜವಾಬ್ದಾರಿಯುತ ನ್ಯಾಯಮೂರ್ತಿ. ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಅನೈತಿಕ ಕೆಲಸಗಳಿಗೆ ಪುರಾವೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ. ಹೈಕೋರ್ಟ್‌ ನ್ಯಾಯಮೂರ್ತಿಗೆ ಶಿಕ್ಷೆ ವಿಧಿಸುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲ. ಹಾಗಾಗಿ, ನನ್ನ ವಿರುದ್ಧದ ಆದೇಶ ಅನುಷ್ಠಾನಕ್ಕೆ ತರಲು ಯೋಗ್ಯವಲ್ಲದ್ದು ಎಂದು ವಾದಿಸಿದ್ದಾರೆ.

ಕರ್ಣನ್‌ ವಿರುದ್ಧ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ. ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿರುವ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠ, ಫೆಬ್ರುವರಿ 13ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿದೆ. ಕರ್ಣನ್ ಅವರಿಗೆ ನ್ಯಾಯದಾನದ ಹಾಗೂ ನ್ಯಾಯಾಂಗದ ಆಡಳಿತಕ್ಕೆ ಸಂಬಂಧಿಸಿದ ಯಾವ ಕೆಲಸವನ್ನೂ ನೀಡಬಾರದು ಎಂದು ಆದೇಶಿಸಿದೆ.

SCROLL FOR NEXT