ದೇಶ

ಉತ್ತರಾಖಂಡ ಚುನಾವಣೆ: ಗಂಗಾ ಆರತಿಯಲ್ಲಿ ರಾಹುಲ್, ಹರೀಶ್ ರಾವತ್ ಭಾಗಿ

Manjula VN

ಹರಿದ್ವಾರ: ಉತ್ತರಾಖಂಡದಲ್ಲಿ ಬಹುನಿರೀಕ್ಷಿತ ವಿಧಾನಸಭಾ ಚುನಾವಣೆ ಆರಂಭಗೊಳ್ಳಲು ಇನ್ನು ಕೇವಲ ಎರಡು ದಿನಗಳು ಬಾಕಿಯಿದ್ದು, ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಗಂಗೆಗೆ ಪೂಜೆ ಸಲ್ಲಿಸಿದ್ದಾರೆ.

ಕಳೆದ ರಾತ್ರಿ ಹರಿದ್ವಾರದ ಹರ್ ಕಿ ಪೌರಿಗೆ ಭೇಟಿ ನೀಡಿ ನೀಡಿದ ರಾಹುಲ್ ಗಾಂಧಿ ಹಾಗೂ ಹರೀಶ್ ರಾವತ್ ಅವರು ಗಂಗಾ ಆರತಿಯಲ್ಲಿ ಭಾಗಿಯಾದರು. ನಂತರ ಸಂಪ್ರದಾಯದಂತೆ ಗಂಗೆಗೆ ಪೂಜೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

75 ಕಿ.ಮೀಗಳ ರೋಡ್ ಶೋನಲ್ಲಿ ನಿನ್ನೆಯಷ್ಟೇ ಭಾಗಿಯಾಗಿದ್ದ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ನರೇಂದ್ರಮೋದಿಯವರ ವಿರುದ್ಧ ಕಿಡಿಕಾರಿದ್ದರು. ಕಳಂಕಿತ ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಹೊರಗೆ ಹಾಕಿದ ಬಳಿಕ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಪಕ್ಷಕ್ಕೆ ಯಾವ ಕಾರಣಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದಾರೆಂದು ಪ್ರಶ್ನಿಸಿದ್ದಾರೆ.

ಯಾವುದೇ ಕಾರಣಕ್ಕೂ ಸರ್ಕಾರದಲ್ಲಿ ಭ್ರಷ್ಟಾಚಾರ ಇರಬಾರದು ಎಂದು ಈ ಹಿಂದೆಯೇ ನಾನು ಹರೀಶ್ ಹಾವತ್ ಅವರಿಗೆ ಸೂಚನೆ ನೀಡಿದ್ದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗುವ ನಾಯಕರ ಮೇಲೆ ಒತ್ತಡ ಹೇರುವಂತೆ ಹೇಳಿದ್ದೆ. ಮೋದಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆಂದು ಹೇಳುತ್ತಾರೆ. ಮೋದಿಯವರಿಗೆ ಒಂದು ಪ್ರಶ್ನೆಯನ್ನು ಕೇಳಲು ಇಚ್ಛಿಸುತ್ತೇನೆ, ಕಳಂಕಿತ ನಾಯಕರೆಂದು ಕೆಲ ನಾಯಕರನ್ನು ನಮ್ಮ ಪಕ್ಷದಿಂದಲೇ ಕಿತ್ತು ಹಾಕಿದ್ದೆವು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ನೀವು ಯಾವ ಕಾರಣಕ್ಕೆ ಕಳಂಕಿತ ನಾಯಕರನ್ನು ನಿಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿರಿ? ಎಂದು ಹೇಳಿದ್ದಾರೆ.

SCROLL FOR NEXT