ಲಾಹೋರ್: ಪಾಕಿಸ್ತಾನದ ಲಾಹೋರ್'ನಲ್ಲಿ ಅತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 16 ಮಂದಿ ಸಾವನ್ನಪ್ಪಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಪಾಕಿಸ್ತಾನದ ಲಾಹೋರ್ ನ ಪಂಜಾಬ್ ವಿಧಾನಸಭಾ ಹೊರಭಾಗದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಲಾಗಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ಲಾಹೋಪ್ ಟ್ರಾಫಿಕ್ ಪೊಲೀಸ್ ಮುಖ್ಯಸ್ಥ ಕ್ಯಾಪ್ಟೆನ್ (ಆರ್) ಅಹ್ಮದ್ ಮೊಬೀನ್, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಾಹಿದ್ ಗೊಂಡಾಲ್ ಮತ್ತು ಡಿಸಿಪಿ ಪರ್ವೇಜ್ ಭಟ್ ಮೃತಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳ ಸಾವನ್ನು ಲಾಹೋರ್ ಪೊಲೀಸ್ ಮುಖ್ಯಸ್ಥ ಅಮಿನ್ ವೇನ್ಸ್ ಅವರು ದೃಢಪಡಿಸಿದ್ದಾರೆ. ಪ್ರಸ್ತುತ ಇರುವ ಪರಿಸ್ಥಿತಿಯಲ್ಲಿ ಮೊಬೀನ್ ಅವರು ಸಾವನ್ನಪ್ಪಿರುವುದನ್ನು ನಾನು ದೃಢಪಡಿಸುತ್ತಿದ್ದೇನೆಂದು ಅಮಿನ್ ಅವರು ಹೇಳಿದ್ದಾರೆ.
ಅತ್ಮಾಹುತಿ ದಾಳಿ ನಡೆದ ಸ್ಥಳದಲ್ಲಿ ಸ್ಥಳೀಯರು ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದರು. ಈ ವೇಳೆ ಮುಸುಕುಧಾರಿಯಾಗಿ ದ್ವಿಚಕ್ರ ವಾಹನದಲ್ಲಿ ಬಂದಿರುವ ದಾಳಿಕೋರ ಏಕಾಏಕಿ ಅತ್ಮಾಹುತಿ ಬಾಂಬ್ ಸ್ಫೋಟಿಸಿದ್ದಾನೆ. ಪರಿಣಾಮ ಸ್ಥಳದಲ್ಲಿಯೇ 16 ಮಂದಿ ದುರ್ಮರಣವನ್ನಪ್ಪಿದ್ದಾರೆ. 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಗಾಯಗೊಂಡ 60 ಜನರ ಪೈಕಿ 11 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿ ಹೊಣೆಯನ್ನು ಈವರೆಗೂ ಯಾವುದ ಸಂಘಟನೆಗಳು ಹೊತ್ತುಕೊಂಡಿಲ್ಲ.