ಹೈದರಾಬಾದ್: ಕಳೆದ ವರ್ಷ ಆತ್ಮಹತ್ಯೆಗೆ ಶರಣಾದ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ದಲಿತರಲ್ಲ ಮತ್ತು ಈ ಸಂಬಂಧ ಸಲ್ಲಿಸಲಾಗಿದ್ದ ಜಾತಿ ಪ್ರಮಾಣ ಪತ್ರ ಸಹ ನಕಲಿ ಎಂದು ಮಂಗಳವಾರ ಆಂಧ್ರಪ್ರದೇಶ ಸರ್ಕಾರ ವರದಿ ಸಲ್ಲಿಸಿದೆ. ಅಲ್ಲದೆ ಈ ಸಂಬಂಧ ಗುಂಟೂರು ಜಿಲ್ಲಾಧಿಕಾರಿ ಕಾಂತಿಲಾಲ್ ದಂಡೆ ಮೂಲಕ ವೇಮುಲಾ ಕುಟುಂಬಕ್ಕೆ ನೋಟಿಸ್ ನೀಡಿದ್ದು, 15 ದಿನದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಈ ಸಂಬಂಧ ಇಂದು ಅಂತಿಮ ವರದಿ ಸಲ್ಲಿಸಿದ್ದು, ರೋಹಿತ್ ವೇಮುಲ ದಲಿತ ವಿದ್ಯಾರ್ಥಿಯಲ್ಲ. ಆತ ಇತರೆ ಹಿಂದುಳಿದ ಜಾತಿಗೆ ಸೇರುತ್ತಾನೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ವೇಮುಲಾ ದಲಿತ ವಿದ್ಯಾರ್ಥಿಯೆಂದು ಹೇಳಿ, ಅದಕ್ಕೆ ಪೂರಕವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಿದ್ದ ರೋಹಿತ್ ತಾಯಿಗೆ ಗುಂಟೂರು ಜಿಲ್ಲಾಡಳಿತ ನೋಟಿಸ್ ಜಾರಿಗೊಳಿಸಿದೆ.
ವೇಮುಲ ಆತ್ಮಹತ್ಯೆ ಪ್ರಕರಣ ಆತ ದಲಿತ ವಿದ್ಯಾರ್ಥಿ ಎನ್ನುವ ಕಾರಣಕ್ಕಾಗಿಯೇ ಹೆಚ್ಚು ಸುದ್ದಿ ಮಾಡಿತ್ತು. ಆದರೆ, ಅದರ ಬೆನ್ನಲ್ಲೇ ಆತ ದಲಿತನಲ್ಲ ಎಂಬ ಕೂಗೂ ಕೇಳಿಬಂದಿತ್ತು. ಆದರೆ, ಆತನ ತಾಯಿ ರಾಧಿಕಾ ತಾವು ದಲಿತರು ಎಂದು ವಾದಿಸಿದ್ದರಲ್ಲದೆ ರೋಹಿತ್ ಪರಿಶಿಷ್ಠ ಜಾತಿ ಪ್ರಮಾಣ ಪತ್ರವನ್ನು ಬಿಡುಗಡೆಗೊಳಿಸಿದ್ದರು.
ಇದೀಗ, ಪರಿಶಿಷ್ಠಿ ಜಾತಿ ಪ್ರಮಾಣಪತ್ರವೇ ಸುಳ್ಳು ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ. ಆದರೆ ಆತನ ಕುಟುಂಬ ಮಾತ್ರ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಲು ಮುಂದಾಗಿದೆ.