ನವದೆಹಲಿ: ಮುಸಲ್ಮಾನರಲ್ಲಿ ತ್ರಿವಳಿ ತಲಾಖ್, ನಿಕಾಹ್ ಹಲಾಲಾ ಮತ್ತು ಬಹುಪತ್ನಿತ್ವ ಪದ್ಧತಿಗಳ ಕಾನೂನು ಅಂಶಗಳನ್ನು ನಿರ್ಧರಿಸುವುದಾಗಿ ಹೇಳಿರುವ ಸುಪ್ರೀಂ ಕೋರ್ಟ್, ಮುಸಲ್ಮಾನ ಕಾನೂನಿನಡಿಯಲ್ಲಿ ವಿಚ್ಚೇದನವನ್ನು ನ್ಯಾಯಾಲಯ ಮೇಲ್ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿದೆ.
ನಮ್ಮ ಮೇಲೆ ಪರ್ಯಾಲೋಚನೆಗೆ ಬರುವ ವಿಷಯಗಳನ್ನು ನೀವು ಕುಳಿತು ಚರ್ಚೆ ಮಾಡಿ ತೀರ್ಮಾನಿಸಿ, ನ್ಯಾಯಾಲಯದ ಪರಿಗಣನೆಗೆ ಯಾವ ವಿಚಾರಗಳು ಬರುತ್ತವೆ ಎಂಬುದನ್ನು ನಾವು ತೀರ್ಮಾನಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್ ಮತ್ತು ಎನ್.ವಿ.ರಮಣ ಹಾಗೂ ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠ ಹೇಳಿದೆ.ನಿರ್ದಿಷ್ಟ ಕೇಸಿನ ವಾಸ್ತವಿಕ ಅಂಶಗಳನ್ನು ವ್ಯವಹರಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಕಾನೂನಾತ್ಮಕ ಅಂಶಗಳನ್ನು ನಿರ್ಧರಿಸುತ್ತದೆ ಎಂದು ತಿಳಿಸಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನಡಿ ವಿಚ್ಛೇದನವನ್ನು ಎರಡೂ ಕೋರ್ಟಿನಡಿ ಅಥವಾ ನ್ಯಾಯಾಲಯ ಮೇಲ್ವಿಚಾರಣೆ ಸಾಂಸ್ಥಿಕ ಪಂಚಾಯ್ತಿಯಡಿಯಲ್ಲಿ ಮೇಲ್ವಿಚಾರಣೆ ಮಾಡಬೇಕೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿದೆ.
ತ್ರಿವಳಿ ತಲಾಖ್ ಆಪಾದಿತ ಸಂತ್ರಸ್ತರಿಗೆ ಸಂಬಂಧಿಸಿದ ಪ್ರಕರಣಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ.
ಜಾತ್ಯತೀತತೆ ಮತ್ತು ಲಿಂಗ ಸಮಾನತೆ ದೃಷ್ಟಿಯಿಂದ ಮುಸಲ್ಮಾನರಲ್ಲಿ ತ್ರಿವಳಿ ತಲಾಖ್, ನಿಖಾಹ್ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಯನ್ನು ವಿರೋಧಿಸಿದ್ದ ಕೇಂದ್ರ ಸರ್ಕಾರ ಈ ವಿಷಯವನ್ನು ಮರು ಅವಲೋಕನ ಮಾಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಆದರೆ ಕೇಂದ್ರದ ನಿಲುವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದೆ. ಲಿಂಗ ತಾರತಮ್ಯವನ್ನು ತಳ್ಳಿ ಹಾಕಿರುವ ಅದು ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಯಾರಿಗೂ ಮಧ್ಯ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.