ತಮಿಳುನಾಡು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರನ್ನು ನಿನ್ನೆ ಭೇಟಿ ಮಾಡಿದ ಶಶಿಕಲಾ ಬಣದ ನಿಷ್ಠಾವಂತ ಇ.ಪಳನಿಸ್ವಾಮಿ.
ಚೆನ್ನೈ: ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಗುರುವಾರ ಅಪರಾಹ್ನ ತೀರ್ಮಾನ ಮಾಡುವ ನಿರೀಕ್ಷೆಯಿದೆ.
ಇಂದು ಮಧ್ಯಾಹ್ನ 11.30ಕ್ಕೆ ತಮ್ಮನ್ನು ಭೇಟಿ ಮಾಡುವಂತೆ ವಿ.ಕೆ.ಶಶಿಕಲಾ ಅವರ ನಿಷ್ಠಾವಂತ ಇ.ಪಳನಿಸ್ವಾಮಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಐಎಡಿಎಂಕೆಯಲ್ಲಿ ಶಶಿಕಲಾ ಬಣ ಮತ್ತು ಪನ್ನೀರ್ ಸೆಲ್ವಂ ಬಣ ಎಂದು ಎರಡು ಬಣಗಳು ಉಂಟಾಗಿದ್ದು, ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಏರ್ಪಟ್ಟಿರುವುದು ಈಗಾಗಲೇ ರಾಜ್ಯಪಾಲರ ಗಮನಕ್ಕೆ ಬಂದಿದೆ.
ಕಳೆದ ರಾತ್ರಿ ಪಳನಿಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿ ತಮಗೆ 124 ಶಾಸಕರ ಬೆಂಬಲವಿದೆ ಎಂದು ತೋರಿಸಿದ್ದರು. ನಂತರ ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರನ್ನು ಪಳನಿಸ್ವಾಮಿ ಭೇಟಿ ಮಾಡಿದ್ದರು. ಪನ್ನೀರ್ ಸೆಲ್ವಂಗೆ ಸದ್ಯ 11 ಶಾಸಕರ ಬೆಂಬಲವಿದ್ದು, ಚೆನ್ನೈ ಹತ್ತಿರದ ರೆಸಾರ್ಟ್ ನಿಂದ ಬಿಡುಗಡೆಯಾದರೆ ಇನ್ನಷ್ಟು ಶಾಸಕರು ತಮ್ಮತ್ತ ಬರುತ್ತಾರೆ ಎಂದು ರಾಜ್ಯಪಾಲರಿಗೆ ವಿವರಿಸಿದ್ದಾರೆ.
ಒಟ್ಟು 135 ಶಾಸಕರಲ್ಲಿ 124 ಶಾಸಕರು ಪಳನಿಸ್ವಾಮಿಯವರ ಕಡೆಗೆ ಸೇರಿದ್ದಾರೆ. ಶಶಿಕಲಾ ನಿಷ್ಠಾವಂತ ಶಾಸಕರು ಸತತ 9ನೇ ದಿನವಾದ ಇಂದು ಕೂಡ ಮಹಾಬಲಿಪುರಂನ ಗೋಲ್ಡನ್ ಬೆ ರೆಸಾರ್ಟ್ ನಲ್ಲಿಯೇ ಉಳಿದುಕೊಂಡಿದ್ದಾರೆ.
ಇನ್ನೊಂದು ಮೂಲದ ಪ್ರಕಾರ, ವಿಧಾನಸಭೆಯಲ್ಲಿ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂಗೆ ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತವೆ. ಶಾಸಕರು ಮತದಾನದ ಮೂಲಕ ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡುವ ಸಾಧ್ಯತೆಗಳಿವೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.