ದೇಶ

ನಾನು ನಿಜವಾದ ಸಮಾಜವಾದಿ ಪಕ್ಷವನ್ನು ಮುನ್ನಡೆಸುತ್ತಿದ್ದೇನೆ: ಅಖಿಲೇಶ್ ಯಾದವ್

Lingaraj Badiger
ಎಟವಾ: ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ತಾವು ನಿಜವಾದ ಸಮಾಜವಾದಿ ಪಕ್ಷವನ್ನು ಮುನ್ನಡೆಸುತ್ತೇನೆ ಎಂದು ಹೇಳುವ ಮೂಲಕ ತಮ್ಮ ಬಲ ಕುಗ್ಗಿಸಲು ಯತ್ನಿಸುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಎಟವಾದಲ್ಲಿ ಮೊದಲ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್ ಅವರು, ನಾನು ಯಾರನ್ನು ನಂಬಿದ್ದೇನೋ ಅವರೇ ನನ್ನ ಮತ್ತು ನೇತಾಜಿ(ಮುಲಾಯಂ ಸಿಂಗ್ ಯಾದವ್) ಮಧ್ಯ ಭಿನ್ನಾಭಿಪ್ರಾಯ ತಂದಿಟ್ಟಿದ್ದು. ಅವರು ನನ್ನಿಂದ ಸೈಕಲ್(ಸಮಾಜವಾದಿ ಪಕ್ಷದ ಚಿಹ್ನೆ) ಕಿತ್ತಿಕೊಳ್ಳಲು ಯತ್ನಿಸಿದರು ಎಂದು ಪರೋಕ್ಷವಾಗಿ ತಮ್ಮ ಚಿಕ್ಕಪ್ಪನ ವಿರುದ್ಧ ವಾಗ್ದಾಳಿ ನಡೆಸಿದರು, ಶಿವಪಾಲ್ ಯಾದವ್ ಅವರು ಪಕ್ಕದ ಜಸ್ವಂತನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಈ ಜನ ಹೊಸ ಪಕ್ಷ ಸ್ಥಾಪಿಸಲು ಬಯಸಿದ್ದರು. ರಾಜ್ಯದಲ್ಲಿ ವಿಧಾಸಭೆ ಚುನಾವಣೆ ವಿಭಿನ್ನ ಹೋರಾಟಗಳ ಮೇಲೆ ನಡೆಯುತ್ತಿದ್ದು, ಸ್ವತಃ ನನ್ನನ್ನೇ ಸೋಲಿಸುವ ಯತ್ನಗಳು ನಡೆಯುತ್ತಿವೆ. ಆದರೆ ಎಟವಾ ಜನ ಅಂತಹ ಕುತಂತ್ರಗಳಿಗೆ ಬಲಿಯಾಗಬಾರದು ಎಂದರು.
ಕೆಲವು ಜನ ನನ್ನನ್ನು ಪಕ್ಷದಿಂದ ಹೊರಹಾಕಲು ಯತ್ನಿಸಿದರು. ಆದರೆ ಅದಕ್ಕೆ ನಾನು ಅವಕಾಶ ಕೊಡಲಿಲ್ಲ. ನಾನು ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಆದರೆ ಅವರು ನನ್ನನ್ನು ಬಲಹೀನ ಮಾಡಲು ಯತ್ನಿಸಿದರು ಎಂದು ಅಖಿಲೇಶ್ ಆರೋಪಿಸಿದರು.
SCROLL FOR NEXT