ಗೋರಾಖ್ಪುರ: ಲಖನೌ ಮೆಟ್ರೋ ಯೋಜನೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಭ್ರಷ್ಟಾಚಾರ ಮಾಡಿದ್ದಾರೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶನಿವಾರ ಗಂಭೀರ ಆರೋಪವನ್ನು ಮಾಡಿದ್ದಾರೆ.
ಗೋರಾಖ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಸಮಾಜವಾದಿ ಪಕ್ಷ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು. ಇದೀಗ ಚುನಾವಣೆ ಹಿನ್ನಲೆಯಲ್ಲಿ ಇಬ್ಬರು ಕೈಜೋಡಿಸಿ ಮೈತ್ರಿ ಮಾಡಿಕೊಂಡಿದ್ದಾರೆ. ಎರಡು ಅಪವಿತ್ರ ಹಾಗೂ ಭ್ರಷ್ಟ ಪಕ್ಷಗಳು ಮೈತ್ರಿಗೊಂಡಿವೆ ಎಂದು ಹೇಳಿದ್ದಾರೆ.
ರಸ್ತೆಯಾಗಲೂ ಅಥವಾ ಮೆಟ್ರೋ ಯೋಜನೆಯಾಗಲಿ ಉತ್ತರಪ್ರದೇಶ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ತಮ್ಮ ಕುಟುಂಬ ಸದಸ್ಯರೊಡನೆ ಮೆಟ್ರೋದಲ್ಲಿ ಸಂಚಾರ ಮಾಡಬೇಕೆಂದುಕೊಂಡಿದ್ದ ಜನರು ಇದೀಗ ಬರೀಕೈನಿಂದ ಹೊರ ನಡೆಯಬೇಕಿದೆ. ಯೋಜನೆಗೆ ಚಾಲನೆ ನೀಡಿ ಹಲವು ಕಾಲ ಕಳೆದಿದ್ದರೂ ಈಗಲೂ ಮೆಟ್ರೋ ಆರಂಭಗೊಂಡಿಲ್ಲ. ಹಲವು ವಿಚಾರಗಳಲ್ಲಿ ಉತ್ತರಪ್ರದೇಶದ ಜನತೆಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಜನರಿಗೆ ಭರವಸೆಗಳನ್ನು ನೀಡಿರುವ ಅವರು, ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದರೆ, ರೈತರ ಸಾಲವನ್ನು ಮನ್ನಾ ಮಾಡಲಾಗುತ್ತದೆ ಹಾಗೂ ಮಹಿಳೆಯರಿಗೆ ಉಚಿತವಾಗಿ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.