ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಪ್ರಕಟಿಸಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ
ನವದೆಹಲಿ: "ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ಪಾದಿಸಿ ಉತ್ತೇಜಿಸುತ್ತಿರುವ ರಾಷ್ಟ್ರ", ಪಾಕಿಸ್ತಾನ ಉಗ್ರವಾದಿಗಳ ಪಾಲಿನ ಸ್ವರ್ಗ", ಪಾಕಿಸ್ತಾನ ಒಂದು ಭಯೋತ್ಪಾದಕ ರಾಷ್ಟ್ರ" ಹೀಗೆ ಹೋದಲ್ಲೆಲ್ಲಾ ಪಾಕಿಸ್ತಾನದ ಮುಖವಾಡ ಬಯಲು ಮಾಡಿದ್ದರು ಪ್ರಧಾನಿ ನರೇಂದ್ರ ಮೋದಿ. ಆದರೆ ಈಗ ಅದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಅಧಿಕೃತವಾಗಿ ಪ್ರಕಟಿಸಲು ಸಾಧ್ಯವಿಲ್ಲ ಎನ್ನುತಿದೆ!
ರಾಜ್ಯಸಭೆಯಲ್ಲಿ ಪಕ್ಷೇತರ ಸಂಸದ ರಾಜೀವ್ ಚಂದ್ರಶೇಖರ್ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಅಧಿಕೃತವಾಗಿ ಘೋಷಿಸುವ ಖಾಸಗಿ ಮಸೂದೆ (The Declaration of Countries as Sponsor of Terrorism Bill, 2016) ಯನ್ನು ಮಂಡಿಸಿ ಕೇಂದ್ರ ಸರ್ಕಾರ ಅದನ್ನು ಪುರಸ್ಕರಿಸಬೇಕೆಂದು ಆಗ್ರಹಿಸಿದ್ದಾರೆ. ಆದರೆ ರಾಜೀವ್ ಚಂದ್ರಶೇಖರ್ ಅವರ ಮಸೂದೆಯನ್ನು ಅಂಗೀಕರಿಸಲು ತಿರಸ್ಕರಿಸಿರುವ ಕೇಂದ್ರ ಸರ್ಕಾರ ಹಾಗೆಲ್ಲಾ ಒಂದು ರಾಷ್ಟ್ರವನ್ನು ಭಯೋತ್ಪಾದಕ ರಾಷ್ಟ್ರ ಎಂದು ಸಂಸತ್ ನಲ್ಲಿ ಅಧಿಕೃತವಾಗಿ ಪ್ರಕಟಿಸಲು ಸಾಧ್ಯವಿಲ್ಲ ಎಂದಿದೆ.
ಭಾರತ ಯಾವುದೇ ರಾಷ್ಟ್ರವನ್ನು ನೇರವಾಗಿ ಭಯೋತ್ಪಾದಕ ರಾಷ್ಟ್ರ ಎಂದು ಪ್ರಕಟಿಸಲು ಸಾಧ್ಯವಿಲ್ಲ. ಎಲ್ಲಾ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧ ಹೊಂದಿರಬೇಕಾಗುತ್ತದೆ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಖಾಸಗಿ ಮಸೂದೆಯನ್ನು ಬೆಂಬಲಿಸಿರುವುದು ಅತಿ ವಿರಳ ಎಂದು ಗೃಹ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪದೇ ಪದೇ ಭಾರತದ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಅಧಿಕೃತವಾಗಿ ಘೋಷಿಸಿ ಅದರೊಂದಿಗಿನ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಆ ಮೂಲಕ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಒಂಟಿಯಾಗಿಸಬೇಕೆಂದು ರಾಜೀವ್ ಚಂದ್ರಶೇಖರ್ ಖಾಸಗಿ ಮಸೂದೆ ಮಂಡನೆ ವೇಳೆ ಹೇಳಿದ್ದಾರೆ.
2001 ರಲ್ಲಿ ಸಂಸತ್ ಮೇಲೆ ನಡೆದ ಉಗ್ರರ ದಾಳಿಯನ್ನೂ ಮಸೂದೆ ಮಂಡನೆ ವೇಳೆ ಉಲ್ಲೇಖಿಸಿರುವ ರಾಜೀವ್ ಚಂದ್ರಶೇಖರ್, ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ಪಾದಿಸಿ ಉತ್ತೇಜಿಸುವ ಪರಂಪರೆಯನ್ನೇ ಹೊಂದಿದೆ. ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ನಾವು ಅಂತಾರಾಷ್ಟ್ರೀಯ ಸಮುದಾಯದ ಎದುರು ಗೋಗರೆಯುವ ಬದಲು ನಾವೇ ಮುಂದಡಿ ಇಟ್ಟು ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಅಧಿಕೃತವಾಗಿ ಘೋಷಿಸುವ ಗಟ್ಟಿ ನಿರ್ಧಾರ ಕೈಗೊಳ್ಳಬೇಕಿದೆ. ಭಯೋತ್ಪಾದನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಉಗ್ರವಾದವನ್ನು ಉತ್ತೇಜಿಸುವ ರಾಷ್ಟ್ರಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಧಾನದ ಬಗ್ಗೆ ಸ್ವಾಭಾವಿಕವಾಗಿ ಅಂತಾರಾಷ್ಟ್ರೀಯ ಸಮುದಾಯ ಭಾರತದ ನಡೆಯ ಬಗ್ಗೆ ಗಮನ ಕೇಂದ್ರೀಕರಿಸಿರುತ್ತದೆ. ಭಾರತ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವ ಮಸೂದೆ ಅಂಗೀಕರಿಸಿದರೆ ಅದು ಮುಂದಿನ ದಿನಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉಗ್ರವಾದ ಬೆಂಬಲಿಸುವ ರಾಷ್ಟ್ರಗಳಿಗೂ ಅನ್ವಯವಾಗಲಿದೆ ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.