ದೇಶ

30 ಮಂದಿ ಪ್ರಯಾಣಿಸುತ್ತಿದ್ದ ಲಕ್ಸುರಿ ಬಸ್ ನಲ್ಲಿ ಅಗ್ನಿ ಆಕಸ್ಮಿಕ: ಕೂದಲೆಳೆ ಅಂತರದಲ್ಲಿ ಪ್ರಯಾಣಿಕರೆಲ್ಲರೂ ಪಾರು!

Srinivasamurthy VN

ಹೈದರಾಬಾದ್: ಕರ್ನಾಟಕದಲ್ಲಿ ಕೆಎಸ್ ಆರ್ ಟಿಸಿ ಬಸ್ ಅಗ್ನಿ ದುರಂತ ಪ್ರಕರಣ ಹಸಿರಾಗಿರುವಂತೆಯೇ ಇಂತಹುದೇ ಘಟನೆ ನೆರೆಯ ತೆಲಂಗಾಣ ರಾಜ್ಯದಲ್ಲೂ ಸಂಭವಿಸಿದೆ.

ನಿನ್ನೆ ಮಧ್ಯಾಹ್ನ ಅಲೇರ್ ಬಳಿ ಇರುವ ಹೈದರಾಬಾದ್ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದು, ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಇಡೀ ಬಸ್ ಅನ್ನು ಆವರಿಸಿಕೊಂಡಿದೆ. ಘಟನೆಯ ಮುನ್ಸೂಚನೆ ತಿಳಿದ  ಚಾಲಕ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಬಸ್ ನಿಂದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಬಳಿಕ ಬೆಂಕಿ ಇಡೀ ಬಸ್ ಗೆ ವ್ಯಾಪಿಸಿ, ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ಮೂಲಗಳ ಪ್ರಕಾರ ಬಸ್ ವರಂಗಲ್ ನಿಂದ ಹೈದರಾಬಾದ್ ಗೆ ತೆರಳುತ್ತಿತ್ತು. ಹೈದರಾಬಾದ್ ನಗರ ಪ್ರವೇಶಕ್ಕೆ ಕೇವಲ 50 ಕಿ.ಮೀ ಇರುವಂತೆಯೇ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಬರಲಾರಂಭಿಸಿತು. ಆಗ ಚಾಲಕ  ಕೂಡಲೇ ಎಲ್ಲರನ್ನೂ ಬಸ್ ನಿಂದ ಕೆಳಗೆ ಇಳಿಸಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಬಸ್ ಆವರಿಸಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.  ಇನ್ನು ಘಟನೆ ಸಂಬಂಧ ಆಘಾತ ವ್ಯಕ್ತಪಡಿಸಿರುವ ತೆಲಂಗಾಣ ರಾಜ್ಯ  ರಸ್ತೆ ಸಾರಿಗೆ ಸಚಿವ ಪಿ ಮಹೇಂದ್ರ ರೆಡ್ಡಿ ಅವರು, ಘಟನೆಯ ತನಿಖೆಗೆ ಆದೇಶಿಸಿದ್ದಾರೆ.

ಕಳೆದ ವಾರವಷ್ಟೇ ಉತ್ತರ ಪ್ರದೇಶದಲ್ಲೂ ಇಂತಹುದೇ ಘಟನೆ ಸಂಭವಿಸಿತ್ತು. ಸುಮಾರು 70 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಡಬಲ್ ಡೆಕ್ಕರ್ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬ್ಯಾಟರಿಯಲ್ಲಿ ಬೆಂಕಿ  ಕಾಣಿಸಿಕೊಳ್ಳುತ್ತಿದ್ದಂತೆಯೇ ಚಾಲಕ ಬಸ್ ನಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಕೆಳಗಿಳಿಸಿದ್ದ. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿತ್ತು.

SCROLL FOR NEXT