ದೇಶ

ಕತ್ತೆಗಳು ದಣಿವರಿಯದಂತೆ ದುಡಿಯುತ್ತವೆ: ಅಖಿಲೇಶ್ ಯಾದವ್ ಗೆ ಪ್ರಧಾನಿ ಮೋದಿ ಟಾಂಗ್

Sumana Upadhyaya
ಬಹ್ರೈಚ್(ಉ.ಪ್ರ): ಗುಜರಾತ್ ನ ಕತ್ತೆಗಳ ಪರ ಪ್ರಚಾರ ಮಾಡಬೇಡಿ ಎಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಗೆ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೀಡಿದ್ದ ಸಲಹೆಗೆ ಗುರುವಾರ ಉತ್ತರ ಪ್ರದೇಶದ ಬಹ್ರೈಚ್ ರ್ಯಾಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. 
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ದೇಶದ ಜನರು ನನ್ನ ಯಜಮಾನರು. ನಾನು ಕತ್ತೆಗಳಿಂದ ಸ್ಪೂರ್ತಿ ಪಡೆದುಕೊಳ್ಳುವುದು ಏಕೆಂದರೆ ನಾನು ಜನರಿಗಾಗಿ ಹಗಲಿರುಳು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ಅಖಿಲೇಶ್ ಯಾದವ್ ಗೆ ಸಲಹೆ ನೀಡಿದ ಅವರು, ನೀವು ಪ್ರದರ್ಶಿಸುವ ದ್ವೇಷ ಯೋಗ್ಯವಾಗಿಲ್ಲ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿ ನಿಮ್ಮನ್ನು ಕೂಡ ಮುಳುಗಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ನೀವಿಂದು ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ಗುಜರಾತ್ ನ ಕತ್ತೆಯ ಚಿತ್ರವನ್ನು ಅಂಚೆಚೀಟಿಯಲ್ಲಿ ಮುದ್ರಿಸಿತ್ತು ಎಂದು ಕೂಡ ಪ್ರಧಾನಿ ಹೇಳಿದರು.
ಇಂದು ಉತ್ತರ ಪ್ರದೇಶದ 12 ಜಿಲ್ಲೆಗಳ 53 ವಿಧಾನಸಭಾ ಕ್ಷೇತ್ರಗಳಲ್ಲಿ 4ನೇ ಹಂತದ ಮತದಾನ ನಡೆಯುತ್ತಿದ್ದು, ಇದು ಇನ್ನೆರಡು ವರ್ಷಗಳಲ್ಲಿ ಬರುವ ಲೋಕಸಭೆ ಚುನಾವಣೆಯ ಹಣೆಬರಹ ನಿರ್ಧರಿಸಲಿದೆ ಎಂದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ. ಈ ಸಂದರ್ಭದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ಖಂಡನೆಯಲ್ಲಿ ತೊಡಗಿವೆ.
SCROLL FOR NEXT