ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ
ನವದೆಹಲಿ: ಕಾಶ್ಮೀರ ಸ್ವಾತಂತ್ರ್ಯಕ್ಕಾಗಿ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಅವರನ್ನು ಜೆಡಿ(ಯು) ಶನಿವಾರ ಸಮರ್ಥಿಸಿಕೊಂಡಿದೆ.
ಈ ಕುರಿತಂತೆ ಮಾತನಾಡಿರುವ ಜೆಡಿ(ಯು) ನಾಯಕ ಪವನ್ ವರ್ಮಾ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಗುತ್ತಿದೆ ಎಂಬುದು ಫರೂಕ್ ಅಬ್ದುಲ್ಲಾ ಅವರಿಗೆ ಚೆನ್ನಾಗಿ ತಿಳಿದಿದೆ. ಕಾಶ್ಮೀರ ಪರಿಸ್ಥಿತಿ ಬಗ್ಗೆ ಫರೂಕ್ ಅಬ್ದುಲ್ಲಾ ಅವರಿಗಿಂತ ಚೆನ್ನಾಗಿ ಯಾರೊಬ್ಬರೂ ಅರ್ಥಮಾಡಿಕೊಂಡಿಲ್ಲ. ಅವರ ರಾಷ್ಟ್ರೀಯತೆಯ ಬಗ್ಗೆ ಅನುಮಾನ ಪಡಬಾರದು. ಕಾಶ್ಮೀರ ಯುವಕರು ರಾಜಕೀಯದ ಭಾಗವಲ್ಲ ಎಂಬ ರೀತಿಯಲ್ಲಿ ಫರೂಕ್ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಾಶ್ಮೀರ ಯುವಕರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರುವ ಅಗತ್ಯವಿದೆ. ಕಾಶ್ಮೀರ ಯುವಕರನ್ನು ಸಮಸ್ಯೆಯಿಂದ ಹೊರ ತಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಯತ್ನಗಳನ್ನು ಮಾಡಬೇಕಿದೆ ಎಂದು ತಿಳಿಸಿದ್ದಾರೆ.