ನವದೆಹಲಿ: ಮೊನ್ನೆ ಶಿವರಾತ್ರಿಯಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಆದಿಯೋಗಿ ಶಿವನ 112 ಅಡಿಗಳ ಎತ್ತರದ ಮೂರ್ತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು.
ಕಾರ್ಯಕ್ರಮದಲ್ಲಿ ಆದಿಯೋಗಿಯ ಭಾವಚಿತ್ರವಿರುವ ಶಾಲನ್ನು ಜಗ್ಗಿ ವಾಸುದೇವ ಅವರು ಪ್ರಧಾನಿಯವರು ಕೊರಳಿಗೆ ಹಾಕಿ ಸನ್ಮಾನಿಸಿದ್ದರು. ಮೋದಿಯವರಿಗೆ ನೀಡಿದ ಶಾಲನ್ನು ನೋಡಿ ಬಹಳ ಖುಷಿಯಾಗಿ ಶಿಲ್ಪಿ ತಿವಾರಿ ಎಂಬುವವರು ಅದೇ ದಿನ ಸಂಜೆ ಟ್ವೀಟ್ ಮಾಡಿ, ನಾನು ನರೇಂದ್ರ ಮೋದಿಯವರ ಶಾಲು ನನಗೆ ಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದರು.
24 ಗಂಟೆಯೊಳಗೆ ಕೈ ಸೇರಿದ ಪ್ರಧಾನಿಯ ಶಾಲು
ಆಕೆ ಟ್ವೀಟ್ ಮಾಡಿ 24 ಗಂಟೆ ಕಳೆಯುವುದರೊಳಗೆ ಆಶ್ಚರ್ಯ ವೆಂಬಂತೆ ಆಕೆಗೆ ಶಾಲು ಮತ್ತು ಆಕೆ ಟ್ವೀಟ್ ಮಾಡಿದ ಪ್ರಿಂಟೌಟ್ ಪ್ರಧಾನಿಯವರ ಸಹಿಯೊಂದಿಗೆ ಆಕೆಗೆ ಬಂದು ತಲುಪಿತ್ತು.
ಶಿಲ್ಪಿಗೆ ಇದು ಕನಸೋ, ನನಸೋ ಎಂದು ಒಂದು ಕ್ಷಣ ನಂಬಲು ಅಸಾಧ್ಯವಾಯಿತು. ಆದಿಯೋಗಿ ಹಾಗೂ ಆಧುನಿಕ ಭಾರತದ ಕರ್ಮಯೋಗಿಯ ಆಶೀರ್ವಾದ ಪಡೆದದ್ದು ತುಂಬಾ ಖುಷಿಯಾಗುತ್ತಿದೆ. ದೇಶದ ಪ್ರಧಾನಿಯಾದರೂ ಕೂಡ ಪ್ರತಿನಿತ್ಯ ನಮ್ಮಂತಹ ಕೋಟ್ಯಂತರ ಸಾಮಾನ್ಯ ಜನರ ಆಸೆ, ಆಕಾಂಕ್ಷೆಗಳನ್ನು ನರೇಂದ್ರ ಮೋದಿಯವರು ಆಲಿಸುತ್ತಾರೆ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಶಿಲ್ಪಿ ತಿವಾರಿ ಟ್ವೀಟ್ ಮಾಡಿದ್ದಾಳೆ.
ಇದೀಗ ಟ್ವಿಟ್ಟರ್ ನಲ್ಲಿ ಶಿಲ್ಪಿ ಮನೆಮಾತಾಗಿದ್ದು, ಆಕೆಗೆ ಅನೇಕ ಟ್ವೀಟ್ ಗಳು ಬರುತ್ತಿವೆ.