ಕಠ್ಮಂಡು: ವಿತ್ತ ಸಚಿವ ಅರುಣ್ ಜೇಟ್ಲಿ ನೇಪಾಳ ಹೂಡಿಕೆ ಶೃಂಗಸಭೆಯಲ್ಲಿ ಭಾಗವಹಿಸಲು ಮಾ.2 ರಂದು ನೇಪಾಳಕ್ಕೆ ಭೇಟಿ ನೀಡಲಿದ್ದಾರೆ.
ಶೃಂಗಸಭೆಯಲ್ಲಿ ಭಾಗವಹಿಸುವುದರೊಂದಿಗೆ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ (ಪ್ರಚಂಡ) ಅವರು ಸೇರಿ ಎಲ್ಲಾ ಪ್ರಮುಖ ನಾಯಕರೊಂದಿಗೂ ಅರುಣ್ ಜೇಟ್ಲಿ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಅರುಣ್ ಜೇಟ್ಲಿ ಅವರ ನೇಪಾಳ ಭೇಟಿಯ ಬಗ್ಗೆ ಮಾತನಾಡಿರುವ ನೇಪಾಳದ ಕೈಗಾರಿಕಾ ಸಚಿವ ನಬೀಂದ್ರ ರಾಜ್ ಜೋಷಿ, ನೇಪಾಳದ ಅಭಿವೃದ್ಧಿಯ ಕುರಿತಂತೆ ಚರ್ಚೆ ನಡೆಯಲಿದ್ದು, ನೇಪಾಳಕ್ಕೆ ನೆರವಾಗಬಲ್ಲಂತಹ ಘೋಷಣೆಗಳ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ನ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನ ಅಧ್ಯಕ್ಷ ಜಿನ್ ಲಿಕುನ್ ಸಹ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಚೀನಾ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಹಾಂಕ್ ಕಾಂಗ್, ಮಲೇಷ್ಯಾ ಸೇರಿದಂತೆ 24 ದೇಶಗಳ 250 ಸಾಂಸ್ಥಿಕ ಹಾಗೂ ವೈಯಕ್ತಿಕ ಹೂಡಿಕೆದಾರರು ನೇಪಾಳದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ನೇಪಾಳ ಕೈಗಾರಿಕಾ ಸಚಿವರು ತಿಳಿಸಿದ್ದಾರೆ.