ದೇಶ

ನನಗಿಂತಲೂ ಮುಖ್ಯಮಂತ್ರಿ ಸ್ಥಾನಕ್ಕೆ ಅಖಿಲೇಶ್ ಸೂಕ್ತ ಅಭ್ಯರ್ಥಿ: ಶೀಲಾ ದೀಕ್ಷಿತ್

Manjula VN

ನವದೆಹಲಿ: ನನಗಿಂತಲೂ ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ಅಭ್ಯರ್ಥಿಯಾಗಿದ್ದು, ಅಖಿಲೇಶ್ ಮುಖ್ಯಮಂತ್ರಿಯಾದರೆ ನನಗೆ ಸಂತೋಷವಾಗುತ್ತದೆ ಎಂದು ಉತ್ತರಪ್ರದೇಶಕ್ಕೆ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿರುವ ಶೀಲಾ ದೀಕ್ಷಿತ್ ಅವರು ಹೇಳಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಅವರು, ಪ್ರಸ್ತುತ ಉತ್ತರಪ್ರದೇಶ ರಾಜ್ಯದಲ್ಲಿರುವ ಪರಿಸ್ಥಿತಿಯನ್ನು ನೋಡಿದರೆ, ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ನನಗಿಂತಲೂ ಅಖಿಲೇಖ್ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯಾಗಿದ್ದು, ಅಖಿಲೇಖ್ ಅವರು ಮುಖ್ಯಮಂತ್ರಿಯಾದರೆ ನನಗೆ ಸಂತೋಷವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ಸಮಾಜವಾದಿ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಕುರಿತಂತೆ ಈ ವರೆಗೂ ಯಾವುದೇ ಅಂತಿಮ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಉತ್ತರಪ್ರದೇಶದಲ್ಲಿ 2500 ಕಿ.ಮೀ ಕಿಸಾನ್ ಮಹಾಯಾತ್ರಾ ಆರಂಭಿಸಿದ್ದ ಸಂದರ್ಭದಲ್ಲಿ 2017ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಬಯಸಿದರೆ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿದೆ ಎಂದು ಹೇಳಿದ್ದರು.

ಇದಾದ ಕೆಲವೇ ದಿನಗಳ ಬಳಿಕ ಅಖಿಲೇಖ್ ಯಾದವ್ ಅವರು ರಾಹುಲ್ ಗಾಂಧಿಯವರನ್ನು ಹೊಗಳಿದ್ದರು. ರಾಹುಲ್ ಗಾಂಧಿಯವರು ಒಳ್ಳೆಯ ಮನುಷ್ಯ. ಬಹಳ ಒಳ್ಳೆಯ ಹುಡುಗ. ಅವರು ಉತ್ತರಪ್ರದೇಶದಲ್ಲಿ ಹೆಚ್ಚು ದಿನ ಇದ್ದರೆ ನಮ್ಮ ಜತೆ ದೋಸ್ತಿ ಆಗಬಹುದು. ಒಳ್ಳೆಯ ಜನ ಒಂದಾದರೆ ತಪ್ಪೇನು ಎಂದು ಕೇಳಿದ್ದರು. ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಅವರ ಹೇಳಿಕೆಗಳು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಸಾಧಿಸುವ ಲಕ್ಷಗಳು ಎಂದು ವಿಶ್ಲೇಷಿಸಲಾಗುತ್ತಿತ್ತು.

SCROLL FOR NEXT