ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಸೇರಿದ 15 ಸಾವಿರ ಕೋಟಿ ರೂ ಆಸ್ತಿಯನ್ನು ಯುಎಇ ಸರ್ಕಾರ ವಶಪಡಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ದಾವೂದ್ ಇಬ್ರಾಹಿಂ ನ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಬೆಳವಣಿಗೆಯ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕೆಂದು ಹೇಳಿದೆ.
ದಾವೂದ್ ಇಬ್ರಾಹಿಂ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ಬೆಳವಣಿಗೆಯನ್ನು ಪ್ರಮುಖ ರಾಜತಾಂತ್ರಿಕ ಗೆಲುವು ಎಂದು ಬಿಜೆಪಿ ಬಣ್ಣಿಸಿದ್ದು, ಪ್ರಧಾನಿ ನ್ರೇಂದ್ರ ಮೋದಿ ಅವರಿಗೆ ಈ ಕೀರ್ತಿ ಸಲ್ಲಬೇಕು ಎಂದು ಬಿಜೆಪಿ ಪಕ್ಷದ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಾಲಾಗಿದೆ.
ದಾವೂದ್ ಸೇರಿದ ಕಂಪನಿಗಳು, ವಿವಿಧ ಸಂಸ್ಥೆಗಳಲ್ಲಿದ್ದ ದಾವೂದ್ ಷೇರುಗಳು ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿದ್ದ ದಾವೂದ್ ನ ಖಾತೆಗಳನ್ನು ಯುಎಇ ಸರ್ಕಾರ ಜಪ್ತಿ ಮಾಡಿದೆ ಎಂಬ ಬಗ್ಗೆ ಕಳೆದ ಒಂದೆರಡು ದಿನಗಳಿಂದ ವರದಿಗಳು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಟ್ವೀಟ್ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾಗೆ ಭೇಟಿ ನೀಡಿ ದ್ವಿಪಕ್ಷೀಯ ಮಾತುಕತೆ ಬಳಿಕ ದುಬೈ ನಲ್ಲಿರುವ ದಾವೂದ್ ಇಬ್ರಾಹಿಂನ ಆಸ್ತಿ ವಿವರಗಳ ಬಗ್ಗೆ ತನಿಖೆ ನಡೆಸಲು ಪ್ರಾರಂಭಿಸಿತ್ತು.