ದೇಶ

ಕೇಂದ್ರ ಬಜೆಟ್'ಗೂ ಪಂಚರಾಜ್ಯಗಳ ಚುನಾವಣೆಗೂ ಯಾವುದೇ ಸಂಬಂಧವಿಲ್ಲ; ಗಂಗ್ವಾರ್

Manjula VN

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಗೂ ಕೇಂದ್ರ ಬಜೆಟ್ ಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು ಶನಿವಾರ ಹೇಳಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಆಸುಪಾಸಿನಲ್ಲೇ ಕೇಂದ್ರದ ಬಜೆಟ್ ದಿನಾಂಕವನ್ನು ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿತ್ತುವೆ. ಅಲ್ಲದೆ, ಕೇಂದ್ರದ ಬಜೆಟ್ ನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಆರೋಪಗಳನ್ನು ವ್ಯಕ್ತಪಡಿಸುತ್ತಿವೆ.

ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಗಂಗ್ವಾರ್ ಅವರು, ಈ ಹಿಂದಿನ ದಿನಗಳಲ್ಲಿ ಕೇಂದ್ರ ಬಜೆಟ್ ಘೋಷಣೆ ಮಾಡಿದ ಬಳಿಕ ನಂತರ ಪ್ರಕ್ರಿಯೆಗಳು ಮೇ ಅಥವಾ ಜೂನ್ ತಿಂಗಳಿನಲ್ಲಿ ಆರಂಭವಾಗುತ್ತಿತ್ತು. ಹೀಗಾಗಿ ಈ ಬಾರಿಯ ಬಜೆಟ್ ಪ್ರಕ್ರಿಯೆ ಮಾರ್ಚ್ 31 ರೊಳಗಾಗಿ ಆರಂಭವಾಗುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಬಜೆಟ್ ನಲ್ಲಿ ಘೋಷಣೆಯಾದ ಹಾಗೂ ತೆಗೆದುಕೊಂಡ ನಿರ್ಧಾರದಂತೆ ತ್ವರಿತಗತಿಯಲ್ಲಿ ಕೆಲಸ ಮಾಡಲು ಇದು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.

ಬಜೆಟ್ ಪ್ರಕ್ರಿಯೆ ದೀರ್ಘಕಾಲಿಕವಾಗಿದ್ದು ಇದನ್ನು ಭಾರತದಲ್ಲಿರುವ ಚುನಾವಣಾ ಆಯೋಗ ಅರ್ಥ ಮಾಡಿಕೊಂಡಿದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ಆಲೋಚಿಸಿ ಆಯೋಗ ಕೇಂದ್ರದ ಬಜೆಟ್ ದಿನಾಂಕವನ್ನು ಘೋಷಣೆ ಮಾಡಿದೆ ಎಂದು ತಿಳಿಸಿದ್ದಾರೆ.

ಕೇಂದ್ರದ ಬಜೆಟ್ ದಿನಾಂಕವನ್ನು ಫೆಬ್ರವರಿ 1ಕ್ಕೆ ನಿಗದಿ ಮಾಡಲಾಗಿದ್ದು, ಪಂಚ ರಾಜ್ಯಗಳ ಚುನಾವಣೆ ಫೆಬ್ರವರಿ 4ರಿಂದ ಆರಂಭವಾಗಲಿದೆ. ಚುನಾವಣೆಗೂ ಮುನ್ನ ಬಜೆಟ್ ಘೋಷಣೆ ಮಾಡಿದರೆ ಬಿಜೆಪಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಬಿಜೆಪಿ ಜನರನ್ನು ತನ್ನತ್ತ ಸೆಳೆದುಕೊಂಡು ಬಿಡುತ್ತದೆ ಎಂಬ ಕಾರಣಕ್ಕೆ ವಿರೋಧಗಳು ತನ್ನ ಭೀತಿಯನ್ನು ವ್ಯಕ್ತಪಡಿಸುತ್ತಿವೆ.

SCROLL FOR NEXT